February 27, 2026
Friday, February 27, 2026
spot_img

LIFE | ಇನ್ನೊಬ್ಬರನ್ನು ಕ್ಷಮಿಸಿಬಿಡೋದು ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳುವ ಔಷಧವೇ?

ಜೀವನದಲ್ಲಿ ಕೆಲವರು ನಮಗೆ ನೋವು ಕೊಡುತ್ತಾರೆ. ಕೆಲವರು ಮಾತಿನಿಂದ, ಕೆಲವರು ನಡೆ-ನುಡಿಯಿಂದ, ಮತ್ತೊಬ್ಬರು ನಂಬಿಕೆಯನ್ನು ಒಡೆದು. ಆ ನೋವು ಮನಸ್ಸಿನಲ್ಲಿ ಗಟ್ಟಿ ಗುರುತು ಬಿಟ್ಟು ಹೋಗುತ್ತದೆ. ಅದನ್ನು ಮರೆಯುವುದು ಸುಲಭವಲ್ಲ. ಆದರೆ ಒಂದು ಪ್ರಶ್ನೆ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ ಅವರನ್ನು ಕ್ಷಮಿಸಿಬಿಡುವುದು ಅವರಿಗಾಗಿ ಮಾಡೋ ಉಪಕಾರವಾ? ಅಥವಾ ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳುವ ಔಷಧವಾ?

ಕ್ಷಮೆ ಎಂದರೆ ತಪ್ಪನ್ನು ಒಪ್ಪಿಕೊಳ್ಳುವುದು ಅಲ್ಲ. ಅದು ನಡೆದದ್ದನ್ನು ಮರೆತುಬಿಡುವುದೂ ಅಲ್ಲ. ಕ್ಷಮೆ ಎಂದರೆ ಆ ನೋವಿನ ಭಾರವನ್ನು ದಿನವೂ ಹೊತ್ತುಕೊಂಡು ಹೋಗುವುದನ್ನು ನಿಲ್ಲಿಸುವುದು ಅಷ್ಟೇ. ನಾವು ಕೋಪವನ್ನು ಹಿಡಿದುಕೊಂಡಿರೋವರೆಗೆ, ನಾವು ನೋವು ಕೊಟ್ಟ ವ್ಯಕ್ತಿಯನ್ನು ನಮ್ಮ ಮನಸ್ಸಿನಲ್ಲೇ ಉಳಿಸಿಕೊಂಡಿರುತ್ತೇವೆ. ಆ ಕೋಪ, ಅಸಹನೆ, ಬೇಸರ ಇವೆಲ್ಲವೂ ನಿಧಾನವಾಗಿ ನಮ್ಮ ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳುತ್ತವೆ.

ಕ್ಷಮಿಸುವುದು ಎಂದರೆ “ನೀನು ಸರಿ” ಎಂದು ಹೇಳುವುದು ಅಲ್ಲ; “ನನ್ನ ಮನಶಾಂತಿ ನನಗೆ ಮುಖ್ಯ” ಎಂದು ಹೇಳುವುದು. ಕೆಲವೊಮ್ಮೆ ಕ್ಷಮೆ ಕೊಡೋದು ಅವರಿಗಾಗಿ ಅಲ್ಲ, ನಮ್ಮ ಒಳಗಿನ ಗೊಂದಲಕ್ಕೆ ವಿರಾಮ ಕೊಡಲು. ಕೋಪವನ್ನು ಹಿಡಿದುಕೊಂಡಿರುವುದು ಬೆಂಕಿ ಹಿಡಿದ ಕಲ್ಲನ್ನು ಕೈಯಲ್ಲಿ ಹಿಡಿದುಕೊಂಡಿರುವಂತೆಯೇ ಸುಡುವುದು ನಮ್ಮನ್ನೇ.

ಇದನ್ನೂ ಓದಿ:

ಆದರೆ ಕ್ಷಮೆ ಅಂದ್ರೆ ಮತ್ತೆ ಅದೇ ತಪ್ಪನ್ನು ಸಹಿಸಿಕೊಳ್ಳಬೇಕು ಎಂದಲ್ಲ. ಗಡಿ ರೇಖೆ ಇಡುವುದು ಮುಖ್ಯ. ಮನಸ್ಸಿಗೆ ನೋವು ಕೊಟ್ಟವರಿಂದ ದೂರ ಉಳಿಯುವುದು ಕೂಡ ಸ್ವಾರ್ಥವಲ್ಲ; ಅದು ಆತ್ಮಗೌರವ. ಕ್ಷಮಿಸಿ ಮುಂದೆ ನಡೆಯುವುದು ಮತ್ತು ಮತ್ತೆ ನೋವು ಅನುಭವಿಸದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಇವು ಎರಡೂ ಸಮಾನವಾಗಿ ಅಗತ್ಯ.

ಕ್ಷಮೆ ಒಂದು ಕ್ಷಣದಲ್ಲಿ ಆಗುವ ಪ್ರಕ್ರಿಯೆಯಲ್ಲ. ಅದು ನಿಧಾನವಾದ ಒಳಗಿನ ಚೇತರಿಕೆ. ಆದರೆ ಒಮ್ಮೆ ಮನಸ್ಸಿನಿಂದ ಕ್ಷಮಿಸಿದರೆ, ಒಳಗೆ ಒಂದು ಹಗುರತನ ಬರುತ್ತದೆ. ಕೋಪದ ಬದಲಿಗೆ ಶಾಂತಿ, ನೋವಿನ ಬದಲಿಗೆ ಸಮಾಧಾನ.

ಹೀಗಾಗಿ, ಇನ್ನೊಬ್ಬರನ್ನು ಕ್ಷಮಿಸುವುದು ಅವರಿಗಿಂತ ಹೆಚ್ಚಾಗಿ ನಮ್ಮಿಗೇ ನೀಡುವ ಉಡುಗೊರೆ. ಅದು ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳುವ ಮೌನ ಔಷಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !