ಜೀವನದಲ್ಲಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ನೋವು ಕೊಟ್ಟವರು, ಕೆಡುಕನ್ನು ಬಯಸಿದವರು ಎದುರಾಗುತ್ತಾರೆ. ಅಂಥ ಸಂದರ್ಭಗಳಲ್ಲಿ ಪ್ರತೀಕಾರವೇ ನ್ಯಾಯ ಅನ್ನೋ ಭಾವನೆ ಸಹಜ. ಆದರೆ ಮನಸ್ಸು ಶಾಂತವಾಗಬೇಕೆಂದರೆ ಕ್ಷಮೆಯೇ ಸರಿಯಾದ ಮಾರ್ಗ ಅಂತಾರೆ ಹೌದಾ? ನಮಗೆ ಕೇಡು ಬಯಸೋರನ್ನು ಕ್ಷಮಿಸುವುದು ದುರ್ಬಲತೆಯ ಸೂಚನೆಯಾ?, ಅಥವಾ ಮಾನವ ಧರ್ಮದ ಉನ್ನತ ರೂಪವೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಉತ್ತರ ಇಲ್ಲಿದೆ ನೋಡಿ
- ಕ್ಷಮೆ ಎದುರಾಳಿಗಲ್ಲ, ನಮ್ಮ ಮನಸ್ಸಿನ ಶಾಂತಿಗೆ: ಕ್ಷಮಿಸುವುದರಿಂದ ತಪ್ಪು ಮಾಡಿದವರು ತಕ್ಷಣ ಬದಲಾಗದೇ ಇರಬಹುದು. ಆದರೆ ಕ್ಷಮೆ ನಮ್ಮೊಳಗಿನ ಕೋಪ, ದ್ವೇಷ ಮತ್ತು ಬೇಸರವನ್ನು ಕರಗಿಸುತ್ತದೆ. ಮನಸ್ಸಿನ ಭಾರ ಇಳಿದಾಗ ಜೀವನ ಸ್ವಲ್ಪ ಹಗುರವಾಗುತ್ತದೆ.
- ಕ್ಷಮೆ ದುರ್ಬಲತೆ ಅಲ್ಲ, ಆತ್ಮಬಲದ ಸಂಕೇತ: ನೋವು ಕೊಟ್ಟವನಿಗೆ ಮನ್ನಣೆ ನೀಡುವುದು ಸುಲಭದ ಕೆಲಸವಲ್ಲ. ಇದಕ್ಕೆ ಧೈರ್ಯ ಬೇಕು, ತಾಳ್ಮೆ ಬೇಕು. ಪ್ರತೀಕಾರಕ್ಕಿಂತ ಮೇಲಿರುವ ಮನೋಸ್ಥಿತಿ ಹೊಂದಿರುವುದೇ ನಿಜವಾದ ಬಲ.
- ಕ್ಷಮೆ ಎಂದರೆ ಎಲ್ಲವನ್ನೂ ಒಪ್ಪಿಕೊಳ್ಳೋದಲ್ಲ: ಕ್ಷಮಿಸುವುದಕ್ಕೂ ಮಿತಿಗಳಿವೆ. ತಪ್ಪನ್ನು ಒಪ್ಪಿಕೊಂಡು, ನಮ್ಮನ್ನು ಮತ್ತೆ ನೋಯಿಸದಂತೆ ಗಡಿಗಳನ್ನು ಹಾಕಿಕೊಳ್ಳುವುದು ಕೂಡ ಅಗತ್ಯ. ಕ್ಷಮೆ ಎಂದರೆ ಅನ್ಯಾಯವನ್ನು ಮೌನವಾಗಿ ಸಹಿಸುವುದಲ್ಲ.
- ಮಾನವ ಧರ್ಮ ಎಂದರೆ ಮಾನವೀಯತೆಯನ್ನು ಉಳಿಸಿಕೊಳ್ಳುವುದು: ಕೋಪಕ್ಕೆ ಕೋಪ ನೀಡಿದರೆ ಕೆಡುಕು ಹೆಚ್ಚುತ್ತೇ ಹೊರತು ಕಡಿಮೆಯಾಗುವುದಿಲ್ಲ. ಕ್ಷಮೆ ಎಂಬ ಗುಣ ಮಾನವೀಯತೆಯನ್ನು ಉಳಿಸುತ್ತದೆ. ಎಲ್ಲವನ್ನೂ ಕ್ಷಮಿಸಬೇಕೆಂದಿಲ್ಲ, ಆದರೆ ಕ್ಷಮಿಸಲು ಮನಸ್ಸು ಮಾಡುವುದು ಮಾನವ ಧರ್ಮದ ದಾರಿ.

