ಜೀವನದಲ್ಲಿ ಗುರಿ ಸಾಧಿಸಲು ಕೇವಲ ಕನಸುಗಳು ಸಾಕಾಗುವುದಿಲ್ಲ, ಅದನ್ನು ನೆರವೇರಿಸಲು ಬೇಕಾಗುವ ಶಕ್ತಿ ಸ್ವಯಂ ನಿಯಂತ್ರಣ. ಮನಸ್ಸಿನ ಹಂಬಲಗಳನ್ನು ನಿಯಂತ್ರಿಸಿ, ಶಿಸ್ತಿನಿಂದ ಬದುಕನ್ನು ಮುನ್ನಡೆಸುವವರು ದೀರ್ಘಾವಧಿಯಲ್ಲಿ ಯಶಸ್ಸನ್ನು ಕಾಣುತ್ತಾರೆ. ಅನೇಕ ಯಶಸ್ವಿ ವ್ಯಕ್ತಿಗಳ ಜೀವನದಲ್ಲಿ ಗಮನಿಸಬಹುದಾದ ಸಾಮಾನ್ಯ ಗುಣವೆಂದರೆ ಅವರ ಸೆಲ್ಫ್ ಕಂಟ್ರೋಲ್. ಇದು ಕೇವಲ ಅಭ್ಯಾಸವಲ್ಲ, ಬದುಕಿನ ಶೈಲಿಯೇ ಆಗಿದೆ.
ತೃಪ್ತಿಯ ಕಲೆ
ಶಿಸ್ತುಬದ್ಧ ವ್ಯಕ್ತಿಗಳು ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥಗೊಳಿಸುವ ಕೆಲಸಗಳಿಂದ ದೂರ ಉಳಿಯುತ್ತಾರೆ. ಇತರರು ಸಾಮಾಜಿಕ ಮಾಧ್ಯಮ ಅಥವಾ ಅಸಮರ್ಪಕ ಖರೀದಿಗಳಲ್ಲಿ ಸಮಯ ಕಳೆಯುವಾಗ, ಇವರು ತಮ್ಮ ಗುರಿಗಳತ್ತ ಗಮನಹರಿಸಿ, ಇದ್ದಲ್ಲೇ ತೃಪ್ತಿ ಕಾಣುತ್ತಾರೆ.
ಸರಿಯಾದ ಯೋಜನೆ
ಯಶಸ್ಸು ಗೊಂದಲದಿಂದ ಬರುತ್ತಿಲ್ಲ. ಶಿಸ್ತಿನ ಜನರು ತಮ್ಮ ದಿನಚರಿಯನ್ನು ಯೋಜಿಸಿ, ಕೆಲಸಗಳಿಗೆ ಆದ್ಯತೆ ನೀಡುತ್ತಾರೆ. ಸಮಯಕ್ಕೆ ಎದ್ದು, ಟುಡು ಲಿಸ್ಟ್ ಸಿದ್ಧಪಡಿಸಿ ಅದನ್ನು ಪಾಲಿಸುವ ಮೂಲಕ ಗುರಿಯತ್ತ ಮುನ್ನಡೆಯುತ್ತಾರೆ.
ಮನಸ್ಸಿನ ಅರಿವು
ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು, ಯೋಚಿಸಿ ನಿರ್ಧರಿಸುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಸಾವಧಾನತೆ (Mindfulness) ಮೂಲಕ ತಮ್ಮ ನಡವಳಿಕೆಯನ್ನು ನಿಯಂತ್ರಿಸುತ್ತಾರೆ.
ಗಡಿಗಳನ್ನು ನಿಗದಿಪಡಿಸುವುದು
ಅತಿಯಾದ ಬದ್ಧತೆ, ವಿಷಕಾರಿ ಸಂಬಂಧಗಳು ಅಥವಾ ಗಾಸಿಪ್ಗಳಲ್ಲಿ ಸಮಯ ವ್ಯರ್ಥ ಮಾಡದೆ, ಅವರು ಗಡಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇದರಿಂದ ಮುಖ್ಯ ವಿಷಯಗಳಿಗೆ ಹೆಚ್ಚು ಶಕ್ತಿ ಉಳಿಯುತ್ತದೆ.
ಪ್ರಗತಿಯನ್ನು ಅಳೆಯುವುದು
ಶಿಸ್ತು ಎಂದರೆ ಎಂದಿಗೂ ತಪ್ಪು ಮಾಡಲ್ಲ ಎಂಬುದಲ್ಲ. ಆದರೆ ಶಿಸ್ತುಬದ್ಧ ಜನರು ತಮ್ಮ ದೈನಂದಿನ ಪ್ರಗತಿಯನ್ನು ಅಳೆದು, ದೀರ್ಘಾವಧಿಯ ಬೆಳವಣಿಗೆಯತ್ತ ಗಮನಹರಿಸುತ್ತಾರೆ. ಸೋಲಿನಿಂದ ಕಲಿಯುವುದನ್ನು ಅವರು ಜೀವನದ ಭಾಗವೆಂದು ಪರಿಗಣಿಸುತ್ತಾರೆ.
ಸ್ವಯಂ ನಿಯಂತ್ರಣ ಕೇವಲ ಯಶಸ್ಸಿಗೆ ದಾರಿ ತೋರಿಸುವುದಲ್ಲ, ಅದು ಬದುಕನ್ನು ಸಮತೋಲನಗೊಳಿಸುತ್ತದೆ. ಈ ಅಭ್ಯಾಸಗಳನ್ನು ಅಳವಡಿಸಿಕೊಂಡವರು ಗುರಿ ಸಾಧಿಸುವುದರ ಜೊತೆಗೆ ಶಾಂತ, ಸಂತೋಷಭರಿತ ಜೀವನವನ್ನೂ ಕಟ್ಟಿಕೊಳ್ಳುತ್ತಾರೆ.