ಎಷ್ಟು ಪರಿಶ್ರಮ ಪಟ್ಟರೂ ಕೂಡ ಕೆಲವೊಂದು ಸಲ ಯಶಸ್ಸು ನಮ್ಮ ಕೈ ಸೇರದೇ ಹೋಗುತ್ತದೆ. ಈ ಸೋಲಿನಿಂದಾಗಿ ದುರಾದೃಷ್ಟ, ಹತಾಶೆ ಮತ್ತು ನಿರಾಸೆಯೆಂಬ ಮನೋಭಾವ ಬಂದೆ ಬರುತ್ತದೆ. ಆದರೆ ಈ ವಿಫಲತೆಯ ಹಿಂದಿನ ಕಾರಣ ನಾವೇ ಆಗಿರಬಹುದು ಎಂಬುದನ್ನು ಮರೆಯಬಾರದು. ಕೆಲವೊಂದು ನಿತ್ಯದ ಹಾನಿಕರ ಅಭ್ಯಾಸಗಳು ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತವೆ. ಈ ಅಭ್ಯಾಸಗಳನ್ನು ಬದಲಾಯಿಸಿದರೆ ನಾವು ಕೂಡ ಗೆಲುವಿನ ದಾರಿಗೆ ಸಾಗಬಹುದು.
ಸೋಲಿನ ಮನೋಭಾವವನ್ನು ದತ್ತು ತೆಗೆದುಕೊಳ್ಳುವುದು
ನನ್ನಿಂದಾಗಿ ನಾನು ಸೋತೆ, ನನಗೆ ಯಶಸ್ಸು ಸಿಗೋದಿಲ್ಲ ಎಂದು ಅಂದುಕೊಳ್ಳೋದು ದೊಡ್ಡ ತಪ್ಪು. ಸೋಲಿನಿಂದ ಕಲಿಯುವ ಪಾಠಗಳನ್ನು ಮರೆತು, ನಿರಂತರವಾಗಿ ನಕಾರಾತ್ಮಕ ಯೋಚನೆಗಳಲ್ಲಿ ತೊಡಗಿದರೆ ಮುಂದಕ್ಕೆ ಸಾಗಲು ಸಾಧ್ಯವಿಲ್ಲ. ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಿ, ಧೈರ್ಯದಿಂದ ಎದುರಿಸುವ ಮನಸ್ಥಿತಿಯು ಯಶಸ್ಸಿಗೆ ಮಾರ್ಗವಾಗಬಹುದು.
ಗುರಿ ಮತ್ತು ದೃಷ್ಟಿಕೋನ
ಸ್ಪಷ್ಟ ಗುರಿಯಿಲ್ಲದೇ ಸಾಗುವವರು ಅನಿಯೋಜಿತವಾಗಿ ಕಾರ್ಯನಿರ್ವಹಿಸುತ್ತಾರೆ. ಇದು ಸಮಯದ ನಷ್ಟವಷ್ಟೇ ಅಲ್ಲ, ವೈಫಲ್ಯಕ್ಕೂ ಕಾರಣವಾಗುತ್ತದೆ. ಜೀವನದಲ್ಲಿ ಏನನ್ನು ಸಾಧಿಸಬೇಕು, ಯಾವ ಮಾರ್ಗದಲ್ಲಿ ಮುಂದೆ ಸಾಗಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಯಾವುದೇ ಸಾಧನೆ ಸಾಧ್ಯವಲ್ಲ.
ಸಮಯ ನಿರ್ವಹಣೆಗೆ ಪ್ರಾಮುಖ್ಯತೆ ನೀಡದೆ ಇರುವುದು
ನಮ್ಮ ಸಮಯ ನಿರ್ವಹಣೆ ಹೇಗಿರುತ್ತೆಂಬುದೇ ನಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಪ್ರತಿದಿನದ ಕೆಲಸಗಳಿಗೆ ಆದ್ಯತೆ ನೀಡದೆ, ಸಮಯವನ್ನು ವ್ಯರ್ಥ ಮಾಡುವುದು ಕಾರ್ಯಕ್ಷಮತೆಯ ಕುಸಿತಕ್ಕೆ ಕಾರಣವಾಗುತ್ತದೆ. ಪಟ್ಟಿ ರೂಪಿಸಿ, ಅತಿ ಮುಖ್ಯ ಕೆಲಸಗಳನ್ನು ಮೊದಲು ಪೂರ್ಣಗೊಳಿಸುವ ಅಭ್ಯಾಸವನ್ನು ರೂಪಿಸಬೇಕು.
ದೈಹಿಕ ಹಾಗೂ ಮಾನಸಿಕ ಆರೋಗ್ಯದ ನಿರ್ಲಕ್ಷ್ಯ
ಆರೋಗ್ಯವೇ ಸಂಪತ್ತು ಎಂಬ ಮಾತು ವೈಜ್ಞಾನಿಕವಾಗಿ ಸಾಬೀತಾಗಿದೆ. ಸರಿಯಾದ ನಿದ್ರೆ, ಆಹಾರ ಮತ್ತು ವ್ಯಾಯಾಮವಿಲ್ಲದೆ ಮನಸ್ಸು ಗೊಂದಲದಲ್ಲಿರುತ್ತದೆ. ಇದು ನಿಮ್ಮ ಮನೋಬಲ ಹಾಗೂ ದಿಟ್ಟತನವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ನಿಮ್ಮ ಒಟ್ಟಾರೆ ಕಾರ್ಯಕ್ಷಮತೆ ಉತ್ತಮವಾಗುತ್ತದೆ.