Monday, September 22, 2025

LIFE | ಜೀವನದಲ್ಲಿ ಸಂತೋಷವಾಗಿರೋಕೆ ಈ ಅಭ್ಯಾಸಗಳಿಂದ ದೂರವಿರಿ ಸಾಕು!

ಜೀವನದಲ್ಲಿ ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಆದರೆ ನಮ್ಮ ಬದುಕಿನಲ್ಲಿ ನಕಾರಾತ್ಮಕ ವಾತಾವರಣ, ಒತ್ತಡ ಹಾಗೂ ಅಸ್ಥಿರ ಜೀವನ ಶೈಲಿ ನಮ್ಮ ಸಂತೋಷಕ್ಕೆ ಅಡ್ಡಿಯಾಗುತ್ತವೆ. ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಟ್ಟರೆ ನಮ್ಮ ಜೀವನ ಸುಲಭ, ಶಾಂತ ಹಾಗೂ ಸಂತೋಷಕರವಾಗಿರಬಹುದು. ಅದಕ್ಕಾಗಿ ತಪ್ಪದೇ ಗಮನ ಕೊಡಬೇಕಾದ ಕೆಲವು ಅಂಶಗಳನ್ನು ಇಲ್ಲಿ ನೋಡೋಣ.

ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ

ಬಿಡುವಿನ ವೇಳೆಯಲ್ಲಿ ಅತಿಯಾಗಿ ಫೋನ್‌ನಲ್ಲಿ ರೀಲ್ಸ್ ಅಥವಾ ಸ್ಕ್ರೋಲ್ ಮಾಡುವುದು ಸಮಯ ಹಾಳು ಮಾಡುತ್ತದೆ. ಜೊತೆಗೆ ಅನಗತ್ಯ ಮಾಹಿತಿಗಳು ಮನಸ್ಸಿಗೆ ಒತ್ತಡ ಉಂಟುಮಾಡುತ್ತವೆ. ಮಿತವಾಗಿ ಬಳಸಿದರೆ ಸಮಸ್ಯೆ ಇಲ್ಲ.

ಹಳೆ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಬೇಡ

ಹಿಂದಿನ ತಪ್ಪುಗಳನ್ನು ನೆನೆಸಿಕೊಳ್ಳುವುದರಿಂದ ಪ್ರಸ್ತುತ ಜೀವನದ ಸಂತೋಷ ಕಳೆದುಹೋಗುತ್ತದೆ. ತಪ್ಪುಗಳನ್ನು ಪಾಠವಾಗಿ ತೆಗೆದುಕೊಳ್ಳಿ ಮತ್ತು ನಿಮ್ಮನ್ನು ನೀವು ಕ್ಷಮಿಸಿಕೊಳ್ಳಿ. ಹೀಗೆ ಮಾಡಿದರೆ ಮನಸ್ಸು ಹಗುರವಾಗುತ್ತದೆ.

ವಿಷಪೂರಿತ ಸಂಬಂಧಗಳಿಂದ ದೂರವಿರಿ

ಮೋಸ ಮಾಡಿದವರು, ನಿಮ್ಮ ಬದುಕಿನಲ್ಲಿ ನಕಾರಾತ್ಮಕತೆ ತರುತ್ತಿರುವವರ ಬಗ್ಗೆ ಹೆಚ್ಚು ಯೋಚಿಸಬೇಡಿ. ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಿ. ಇದು ನಿಮ್ಮ ಮನಸ್ಸಿಗೆ ಶಾಂತಿ ಹಾಗೂ ದೀರ್ಘಕಾಲದ ಸಂತೋಷವನ್ನು ನೀಡುತ್ತದೆ.

ಆಸಕ್ತಿಗಳನ್ನು ನಿರ್ಲಕ್ಷಿಸಬೇಡಿ

ಕೇವಲ ಕೆಲಸ ಹಾಗೂ ಹಣ ಸಂಪಾದನೆ ಜೀವನವಲ್ಲ. ನಿಮ್ಮ ಹವ್ಯಾಸಗಳು, ಆಸಕ್ತಿಗಳಿಗೆ ಸಮಯ ಕೊಡಿ. ಇದು ಜೀವನದಲ್ಲಿ ಸಮತೋಲನ ತರಲು ಸಹಕಾರಿ.

ಆರೋಗ್ಯಕರ ಜೀವನ ಶೈಲಿ ಅನುಸರಿಸಿ

ದಿನವಿಡೀ ಕುಳಿತುಕೊಳ್ಳುವುದು, ಅತಿಯಾಗಿ ಮಲಗುವುದು ಆರೋಗ್ಯವನ್ನು ಹಾಳುಮಾಡುತ್ತದೆ. ನಿಯಮಿತ ವಾಕಿಂಗ್, ವ್ಯಾಯಾಮ, ಅಥವಾ ಮನೆಯಲ್ಲಿ ನೃತ್ಯ ಮಾಡಿದರೂ ಎಂಡೊರ್ಫಿನ್ ಹಾರ್ಮೋನ್ಸ್ ಬಿಡುಗಡೆ ಆಗಿ ಮನಸ್ಸು ಹರ್ಷಭರಿತವಾಗುತ್ತದೆ. ಜೊತೆಗೆ ಸಮತೋಲನ ಆಹಾರ ಸೇವನೆ ಕೂಡ ಸಂತೋಷ ಜೀವನಕ್ಕೆ ಅವಶ್ಯಕ.

ಬದಲಾವಣೆಯನ್ನು ಸ್ವೀಕರಿಸಿ

ಬದಲಾವಣೆ ಜೀವನದ ನಿಯಮ. ಹಳೆಯ ಅಭ್ಯಾಸಗಳಿಗೆ ಅಂಟಿಕೊಂಡರೆ ಹೊಸ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಆರಾಮ ವಲಯದಿಂದ ಹೊರಬಂದು ಹೊಸ ಅನುಭವಗಳನ್ನು ಸ್ವೀಕರಿಸಿದರೆ ಬದುಕಿನಲ್ಲಿ ಹೊಸ ಚೈತನ್ಯ ದೊರೆಯುತ್ತದೆ.

ಇದನ್ನೂ ಓದಿ