ಒಂದು ದಿನ ನೀನು ನಿನ್ನ ಕನಸನ್ನು ಕೈಗೆತ್ತಿಕೊಂಡೆ. ಅದರ ಕಡೆ ನೋಡಿದೆ… ಯೋಚಿಸಿದೆ… ಮತ್ತೆ ಸೈಡ್‌ಗೆ ಇಟ್ಟೆ.
“ನಾಳೆ ಶುರುಮಾಡ್ತೀನಿ” ಅಂದೆ.
ಆ ನಾಳೆ ಮತ್ತೆ ಬಂತು.. ಆದ್ರೆ ಮತ್ತೆ ಅದೇ ಮಾತು — “ಇನ್ನೂ ಸ್ವಲ್ಪ ಸಮಯ ಇರಲಿ… ನಾಳೆ ಮಾಡ್ತೀನಿ.”
ಹೀಗೆ ದಿನಗಳು ಕಳೆದು ಹೋದವು. ಕನಸು ಮಾತ್ರ ಅಲ್ಲೇ ನಿಂತಿತ್ತು. ನಾವು ಜೀವನದಲ್ಲಿ ಬಹಳ ಕೆಲಸಗಳನ್ನು ಮುಂದೂಡುತ್ತೇವೆ. “ಇನ್ನೂ ಸ್ವಲ್ಪ ಸಮಯ ಇರಲಿ,” “ಸರಿಯಾದ ಸಮಯ ಬಂದಾಗ ಶುರುಮಾಡ್ತೀನಿ” ಎಂದುಕೊಂಡೇ ದಿನಗಳನ್ನು ಕಳೆಯುತ್ತೇವೆ. ಆದರೆ ನಿಜವಾಗಿ ನೋಡಿದರೆ, ಆ “ಸರಿಯಾದ ಸಮಯ” ಎಂದಿಗೂ ಬರೋದಿಲ್ಲ
ಪ್ರತಿ ದಿನವೂ ನಾವು ಆರಂಭಿಸಲು ಉತ್ತಮವಾದ ದಿನವೇ. ಆದರೂ ನಾವು ನಮ್ಮನ್ನೇ ತಡೆಯುತ್ತೇವೆ ಕೆಲವೊಮ್ಮೆ ಭಯದಿಂದ, ಕೆಲವೊಮ್ಮೆ ಅಲಸ್ಯದಿಂದ, ಮತ್ತೊಮ್ಮೆ ಆತ್ಮವಿಶ್ವಾಸದ ಕೊರತೆಯಿಂದ. ಇದೇ ಕಾರಣಕ್ಕೆ ಅನೇಕ ಕನಸುಗಳು ಆರಂಭವಾಗದೇ ಉಳಿಯುತ್ತವೆ.
ಇದನ್ನೂ ಓದಿ:
ಯಾವುದೇ ಕೆಲಸವನ್ನು ಶುರುಮಾಡಲು ಪರ್ಫೆಕ್ಟ್ ಪರಿಸ್ಥಿತಿ ಬೇಕಾಗಿಲ್ಲ. ಪರ್ಫೆಕ್ಟ್ ಪ್ಲಾನ್ ಕೂಡ ಅಗತ್ಯವಿಲ್ಲ. ಮೊದಲ ಹೆಜ್ಜೆ ಇಡುವ ಮನಸ್ಸು ಇದ್ದರೆ ಸಾಕು. ಸಣ್ಣ ಪ್ರಯತ್ನದಿಂದಲೇ ದೊಡ್ಡ ಬದಲಾವಣೆಗಳು ಶುರುವಾಗುತ್ತವೆ.
ನಾವು ಇಂದು ಆರಂಭಿಸದೇ ಇದ್ದರೆ, ನಾಳೆಯೂ ಇದೇ ಕಾರಣಗಳನ್ನು ಹೇಳುತ್ತೇವೆ. ಈ ಅಭ್ಯಾಸವೇ ನಮ್ಮನ್ನು ಒಂದೇ ಜಾಗದಲ್ಲಿ ನಿಲ್ಲಿಸುತ್ತದೆ. ಆದರೆ ಇಂದೇ ಒಂದು ಸಣ್ಣ ನಿರ್ಧಾರ ತೆಗೆದುಕೊಂಡರೆ, ಅದೇ ನಿರ್ಧಾರ ನಮ್ಮ ಜೀವನದ ದಿಕ್ಕನ್ನು ಬದಲಿಸಬಹುದು.
ಯಶಸ್ಸು ಒಂದು ದಿನದಲ್ಲಿ ಸಿಗುವುದಿಲ್ಲ. ಆದರೆ ಅದು ಯಾವಾಗಲೂ ಒಂದು ದಿನದ ಆರಂಭದಿಂದಲೇ ಬರುತ್ತದೆ. ಆ ದಿನ ಇಂದು ಆಗಬಹುದು — ನೀವು ನಿರ್ಧರಿಸಿದರೆ.
ಹೀಗಾಗಿ ಇನ್ನೂ ಕಾಯಬೇಡಿ.
ನಿಮ್ಮ ಗುರಿ ಕಡೆ ಮೊದಲ ಹೆಜ್ಜೆ ಇಡಿ.
ಯಾಕೆಂದರೆ ಜೀವನ ಬದಲಾಗೋದು “ನಾಳೆ”ಯಿಂದ ಅಲ್ಲ…
ನೀವು “ಇಂದು” ಶುರುಮಾಡಿದಾಗಲೇ.



