ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ತೋತಾಪುರಿ ಮಾವು ಖರೀದಿ ನಿಷೇಧಿಸಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲಾಡಳಿತ ಹೊರಡಿಸಿದ್ದ ಆದೇಶ ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇದರ ಬೆನ್ನಲ್ಲೇ, ಮಧ್ಯ ಪ್ರವೇಶ ಮಾಡಿದ್ದ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದು, ನಿಷೇಧ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಇದೀಗ ಖುದ್ದು ಸಿಎಂ ಸಿದ್ದರಾಮಯ್ಯ ಕರ್ನಾಟಕದ ರೈತರ ನೆರವಿಗಾಗಿ ಅಖಾಡಕ್ಕಿಳಿದಿದ್ದಾರೆ. ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದ ತೋತಾಪುರಿ ಮಾವು ಖರೀದಿ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿವೆ ಪತ್ರ ಬರೆದಿದ್ದಾರೆ.
ಇತರ ರಾಜ್ಯಗಳಿಂದ ತೋತಾಪುರಿ ಮಾವಿನ ಹಣ್ಣುಗಳನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿ ಚಿತ್ತೂರು ಜಿಲ್ಲಾಧಿಕಾರಿಗಳು ಜೂನ್ 07 ರಂದು ಆದೇಶ ಹೊರಡಿಸಿರುವುದು ತಿಳಿದುಬಂದಿದೆ. ಈ ಹಠಾತ್ ಮತ್ತು ಏಕಪಕ್ಷೀಯ ಕ್ರಮವು ಕರ್ನಾಟಕದ ಮಾವು ಬೆಳೆಗಾರರಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ತೋತಾಪುರಿ ಮಾವನ್ನು ಬೆಳೆಯುವವರಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡಿದೆ.
ಈ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳೊಂದಿಗೆ ದೀರ್ಘಕಾಲದಿಂದ ಸಂಪರ್ಕ ಹೊಂದಿದ್ದಾರೆ. ಪ್ರಸ್ತುತ ನಿರ್ಬಂಧವು ಈ ಸುಸ್ಥಾಪಿತ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದೆ ಮತ್ತು ಕೊಯ್ಲಿನ ನಂತರದ ಗಮನಾರ್ಹ ನಷ್ಟವನ್ನುಂಟುಮಾಡಿದೆ, ಇದು ಸಾವಿರಾರು ರೈತರ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಆಂಧ್ರ ಸಿಎಂಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.