ಹೊಸ ದಿಗಂತ ವರದಿ , ವಿಜಯಪುರ:
ಲಿಂಗಾಯತರನ್ನು ಬಿಜೆಪಿ ಎಂದೂ ಕಡೆಗಣಿಸಿಲ್ಲ, ಬಿಜೆಪಿ ಲಿಂಗಾಯತ ವಿರೋಧಿ ಎಂದರೆ ಹೇಗೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಲ್ಲ ರೀತಿಯಿಂದ ಅಧಿಕಾರ ನೀಡಿದೆ. ಮಾನ, ಮರ್ಯಾದೆ, ಸ್ವಾಭಿಮಾನ ಇದ್ದವರು ಕಾಂಗ್ರೆಸ್ಗೆ ಹೋಗುವುದಿಲ್ಲ. ಲಿಂಗಾಯತ ಮತಗಳಿಂದ ಶಾಸಕರಾಗಿದ್ದೀರಿ, ಮುಖ್ಯಮಂತ್ರಿಯಾಗಿದ್ದೀರಿ, ಎಲ್ಲ ಅಧಿಕಾರವನ್ನು ಪಕ್ಷ ಕೊಟ್ಟಿದೆ. ಆದರೆ ಸದ್ಯ ಬಿಜೆಪಿ ಲಿಂಗಾಯತ ವಿರೋಧಿ ಎನ್ನುವುದು ಸರಿಯಲ್ಲ. ನನ್ನನ್ನು ಉಚ್ಚಾಟನೆ ಮಾಡಲಾಗಿತ್ತು. ನಾನು ಯಾವತ್ತೂ ಪಕ್ಷವನ್ನು ವಿರೋಧಿಸಿ ಮಾತನಾಡಲಿಲ್ಲ. ಸದ್ಯ ಕೆಲವೊಂದು ವಿಷಯ ಬಹಿರಂಗ ಪಡಿಸುತ್ತೇನೆ ಎಂದು ಶೆಟ್ಟರ್ ಹೇಳಿಕೆ ನೀಡುವುದು ಬ್ಲ್ಯಾಕ್ ಮೇಲೆ ಅಷ್ಟೇ ಎಂದರು.
ಕೆ.ಎಸ್. ಈಶ್ವರಪ್ಪ ಅವರಿಗೂ ಟಕೆಟ್ ನಿರಾಕರಣೆ ಮಾಡಲಾಗಿದೆ. ಆದರೆ ಅವರು ಪಕ್ಷ ಸಂಘಟನೆ ಮಾಡಲು ಮುಂದಾಗಿಲ್ಲವೇ ? ಈಶ್ವರಪ್ಪ ಅವರನ್ನು ಅನುಕರಣೆ ಮಾಡಬೇಕು ಎಂದರು.
ಕೋಮುವಾದಿ, ವಿದೇಶಿ ಹಣವನ್ನು ಬಳಕೆ ಮಾಡಿ ಮುಸ್ಲಿಂ ರಾಷ್ಟ್ರವನ್ನಾಗಿಸುವ ಗುರಿ ಹೊಂದಿರುವ ಎಸ್ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆ ಹೋಗುವುದೆಂದರೆ ಏನರ್ಥ ? ಎಂದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅಧಿಕಾರ ಅನುಭವಿಸಿದವರೆಲ್ಲ ಪಕ್ಷ ಬಿಟ್ಟು ಹೋರಟಿದ್ದು ಸರಿಯಲ್ಲ. ಇಷ್ಟು ದಿನ ಎಲ್ಲ ಅಧಿಕಾರ ಅನುಭವಿಸಿ ಈಗ ಅನ್ಯಾಯ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದೇ ನ್ಯಾಯವೇ ? ಎಂದ ಅವರು, ಮರಳಿ ಬಿಜೆಪಿಗೆ ಬರಬೇಕು ಎಂದು ಕೋರಿದರು.
ಎಲ್ಲಿ ಅನ್ಯಾಯ. ನನಗೂ ಅನ್ಯಾಯವಾಗಿದೆ. ಆದಾಗ್ಯೂ. ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದರು.
ಬಿಜೆಪಿಯನ್ನು ಮುಗಿಸಲು ಸಾಧ್ಯವಿಲ್ಲ. ಪ್ರಸ್ತುತ 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗುತ್ತದೆ. ಅನ್ಯ ರೀತಿಯಲ್ಲಿ ಪಕ್ಷದಿಂದ ಸ್ಪರ್ಧಿಸಿದವರ ಠೇವಣಿ ಜಪ್ತಿಯಾಗುತ್ತದೆ. ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೆ ಬರುತ್ತದೆ ಎಂದರು.
ವಿಡಿಎ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಕಿರಣ ಪಾಟೀಲ, ವಿವೇಕಾನಂದ ಡಬ್ಬಿ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.