ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಸಾಕಷ್ಟು ಜನರು ತಮ್ಮ ಹೃದಯ ಆರೋಗ್ಯವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಲು ಆಸ್ಪತ್ರೆಗಳಿಗೆ ತೆರಳುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಈ ರೀತಿ ಹೃದಯಾಘಾತದ ಬಗ್ಗೆ ಭಯಪಡುವ ಬದಲು ಹೃದಯದ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುವುದು , ಅದು ನೀಡುವ ಕೆಲ ಸೂಚನೆಗಳನ್ನು ಕಡೆಗಣಿಸದೇ ಇರುವುದು ಅತ್ಯಗತ್ಯವಾಗಿದೆ.
ಹೃದಯಕ್ಕೂ ನಮ್ಮ ಜೀವನಶೈಲಿಗೂ ನೇರ ಸಂಪರ್ಕವಿದೆ. ದಿನನಿತ್ಯದ ಕೆಲ ಕೆಟ್ಟ ಅಭ್ಯಾಸಗಳು, ಒತ್ತಡದಿಂದ ಕೂಡಿದ ಜೀವನಶೈಲಿ, ಕಡೆಗಣಿಸಿದ ಕೆಲ ಆರೋಗ್ಯ ಸಮಸ್ಯೆಗಳು, ಮಿತಿಮೀರಿದ ವರ್ಕ್‌ಔಟ್ ಮಾದಕ ವಸ್ತುಗಳ ಬಳಕೆ ಕೂಡ ಹೃದಯದ ಆರೋಗ್ಯವನ್ನು ಕೆಡಿಸಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಹೀಗಾಗಿ ಈಗಾಗಲೇ ಕುಟುಂಬದಲ್ಲಿ ಹೃದಯ ಸಮಸ್ಯೆ ಹೊಂದಿರುವವರಿದ್ದರೆ, ಡಯಾಬಿಟಿಸ್, ಹೈಪರ್‍ಟೆನ್ಷನ್ , ಬೊಜ್ಜಿನಂತಹ ಸಮಸ್ಯೆಯಿಂದ ಬಳಲುತ್ತಿರುವವರು ಅಥವಾ ದೀರ್ಘಕಾಲದಿಂದ ಮದ್ಯಪಾನ ಮತ್ತು ಧೂಮಪಾನದ ಅಭ್ಯಾಸವಿರುವವರು ನಿಯಮಿತವಾಗಿ ಹೃದಯದ ಆರೋಗ್ಯ ತಪಾಸಣೆಗೆ ಒಳಗಾಗುವುದು ಒಳಿತು. ಕೆಲವು ಪ್ರಕರಣಗಳಲ್ಲಿ ಹುಟ್ಟಿನಿಂದಲೇ ಇರುವ ಹೃದಯ ದೋಷಕ್ಕೆ ಚಿಕಿತ್ಸೆ ಸಿಗದೇ ಇದ್ದಂತಹ ಸಂದರ್ಭದಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ದೇಹ ನೀಡುವ ಸೂಚನೆ ಕಡೆಗಣಿಸಬೇಡಿ!
ಹೃದಯಾಘಾತಕ್ಕೂ ಮುನ್ನ ದೇಹ ಕೆಲ ಸೂಚನೆಗಳನ್ನು ನೀಡುತ್ತದೆ. ಜೊತೆಗೆ ತಕ್ಷಣ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ. ಎಷ್ಟೋ ಜನರು ಗ್ಯಾಸ್ಟ್ರಿಕ್ ಸಮಸ್ಯೆಯೋ ಅಥವಾ ಹೃದಯಾಘಾತವೋ ಎಂದು ತಿಳಿಯದೇ ಗೊಂದಲಕ್ಕೊಳಗಾಗುವುದು ಇದೆ. ಈ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಮುಖ್ಯ. ಹೃದಯಾಘಾತ ಸಂಭವಿಸಿದಾಗ ಹೃದಯ ಹಿಂಡಿದಂತಹ , ಎದೆ ಮೇಲೆ ಭಾರವಾದ ವಸ್ತುವಿ್ಟ್ಟಂತಹ ಅನುಭವವಾಗುತ್ತದೆ. ದೇಹದ ಮಧ್ಯಭಾಗದಲ್ಲಿ ನೋವು ಆರಂಭವಾಗಿ ಕೈ, ಕುತ್ತಿಗೆ, ದವಡೆ, ಭುಜ , ಬೆನ್ನಿಗೆ ಹರಡುತ್ತದೆ. ನಿರಂತರ ಸುಮಾರು 5 ನಿಮಿಷಗಳ ಕಾಲ ಸಾಕಷ್ಟು ನೋವು ಅನುಭವವಾಗುತ್ತದೆ. ಇದರ ಜೊತೆಗೆ ಉಸಿರಾಟದಲ್ಲಿ ಕಷ್ಟ, ಬೆವರು, ವಾಕರಿಕೆ, ಆಶಕ್ತತೆ ಕೂಡ ಉಂಟಾಗುತ್ತದೆ.
ಇಂತಹ ಸಮಸ್ಯೆ ಕಂಡುಬಂದ ತಕ್ಷಣ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು, ವೈದ್ಯಕೀಯ ನೆರವು ಪಡೆಯುವುದು ಮುಖ್ಯ. ಹೀಗಾಗಿ ಮನೆಯಲ್ಲಿ ಪ್ರತಿಯೊಬ್ಬರು ಈ ಲಕ್ಷಣಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗ್ಯಾಸ್ಟ್ರಿಕ್ ಸಮಸ್ಯೆಯಲ್ಲಿ ನೋವು ನಿರಂತರವಾಗಿರುವುದಿಲ್ಲ . ಆದರೆ ಹೃದಯಾಘಾತವಾದಾಗ ನೋವು ದೇಹದ ಭಾಗಗಳಿಗೆ ಹರಡುತ್ತದೆ ಎಂಬುದು ತಿಳಿದಿರಬೇಕು.
ಹೃದಯಾಘಾತದಿಂದ ಬಚಾವಾಗುವುದು ಹೇಗೆ?
ಹೃದಯಾಘಾತದಿಂದ ಬಚಾವಾಗುವುದು ಎಂದರೆ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಸೇವಿಸುವ ಆಹಾರದಿಂದ ಉದ್ಯೋಗದ ಜೀವನದವರೆಗೆ ಎಲ್ಲಾ ತಪ್ಪು ಹೆಜ್ಜೆಯೂ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲದು.
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮವಾದ ಅಡುಗೆ ಎಣ್ಣೆ, ತರಕಾರಿಯುಕ್ತ ಊಟ, ನಿತ್ಯ ಒಂದಾದರೂ ಹಣ್ಣು , ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ರೂಢಿಯಲ್ಲಿರಲಿ. ತಂಬಾಕು, ಧೂಮಪಾನದಂತಹ ದುಷ್ಚಟಗಳು, ಹೃದಯಕ್ಕೆ ಹಾನಿಕಾರಕ ನೆನಪಿರಲಿ. ತಿಳುವಳಿಕೆ ಇಲ್ಲದೇ, ತರಬೇತುದಾರರಿಲ್ಲದೇ ಅತಿಯಾದ ವರ್ಕ್ಔಟ್ ಗಳನ್ನು ಮಾಡಬೇಡಿ. ಹೈಪರ್‍ಟೆನ್ಷನ್ , ಬಿಪಿ , ಡಯಾಬಿಟಿಸ್ ನಿಯಂತ್ರಣದಲ್ಲಿರಲಿ.
ನಿತ್ಯ ವಾಕಿಂಗ್ ಹೃದಯಕ್ಕೆ ಉತ್ತಮ ಹಾಗೇ 7-9 ಗಂಟೆಗಳ ಉತ್ತಮ ನಿದ್ರೆ ಹೃದಯದ ಆರೋಗ್ಯಕ್ಕೆ ಉತ್ತಮ. ಬಿಪಿ , ಡಯಾಬಿಟಿಸ್ ಸಮಸ್ಯೆ ಇರುವವರು ಹಾಗೂ ಧೂಮಪಾನ ಅಭ್ಯಾಸವಿರುವವರು ನಿಯಮಿತವಾಗಿ ಇಸಿಜಿ (ECG), ಟಿಎಮ್‌ಟಿ (TMT) ಮತ್ತು ಇಕೊ (ECHO) ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಹೀಗಾಗಿ ಹೃದಯಾಘಾತದ ಕುರಿತು ಭಯವಲ್ಲ, ತಿಳುವಳಿಕೆ ಹೊಂದುವುದು ಹಾಗೂ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಹಾಗೇ ಹೃದಯಾಘಾತ ಕುರಿತ ಯಾವುದೇ ಲಕ್ಷಣ ಕಂಡುಬಂದಲ್ಲಿ ಸ್ವ ಚಿಕಿತ್ಸೆ ಮಾಡಿಕೊಳ್ಳದೇ ತಕ್ಷಣ ವೈದ್ಯರ ನೆರವು ಪಡೆಯಬೇಕು.
ಡಾ. ಎಮ್ ಎನ್ ಭಟ್ ಹಿರಿಯ ಇಂಟರ್ವೆನ್ಶನಲ್ ಕಾರ್ಡಿಯಾಲಾಜಿಸ್ಟ್, ಕೆಎಂಸಿ ಆಸ್ಪತ್ರೆ, ಬಿ ಆರ್ ಅಂಬೇಡ್ಕರ್ ವೃತ್ತ ಮಂಗಳೂರು.