March 23, 2026
Monday, March 23, 2026
spot_img

ಹಂಪಿ ಸ್ಕೈ-ಲೈನ್‌ನಲ್ಲಿ ಪುಟಾಣಿಗಳ ಸಂಭ್ರಮ: ಸಚಿವರ ‘ಸರ್ಪ್ರೈಸ್’ ಗಿಫ್ಟ್‌ಗೆ ಮಕ್ಕಳು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಕೇವಲ ಹಬ್ಬವಾಗಿ ಉಳಿಯದೆ, ಜೀವನದ ಅತ್ಯಂತ ಮರೆಯಲಾಗದ ಕ್ಷಣವಾಗಿ ದಾಖಲಾಯಿತು. ಕೇವಲ ನೆಲದ ಮೇಲಿಂದ ಆಕಾಶದಲ್ಲಿ ಹಾರುವ ಹೆಲಿಕಾಪ್ಟರ್ ನೋಡಿ ಕೈಬೀಸುತ್ತಿದ್ದ ಪುಟಾಣಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆಕಾಶಯಾನದ ಅದ್ಭುತ ‘ಸರ್ಪ್ರೈಸ್’ ನೀಡಿದರು.

ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಕುತೂಹಲದಿಂದ ವೀಕ್ಷಿಸಲು ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳು ನೆರೆದಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವರು, ಮಕ್ಕಳ ಬಳಿ ತೆರಳಿ ಕುಶಲೋಪರಿ ವಿಚಾರಿಸಿದರು. “ನಿಮಗೂ ಹೆಲಿಕಾಪ್ಟರ್ ಹತ್ತಬೇಕಾ?” ಎಂಬ ಸಚಿವರ ಪ್ರಶ್ನೆಗೆ ಮಕ್ಕಳು ಸಂಭ್ರಮದಿಂದ “ಹೌದು ಸರ್” ಎಂದು ಏಕಕಂಠದಿಂದ ಉತ್ತರಿಸಿದರು.

ಮಕ್ಕಳ ಮುಗ್ಧ ಆಸೆ ಕಂಡ ಸಚಿವರು ಕ್ಷಣವೂ ತಡಮಾಡದೆ, ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ಏರುವ ಅವಕಾಶ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜೀವನದಲ್ಲಿ ಒಮ್ಮೆಯಾದರೂ ವಿಮಾನ ಅಥವಾ ಹೆಲಿಕಾಪ್ಟರ್ ಏರಬೇಕು ಎಂಬ ಕನಸು ಹೊತ್ತಿದ್ದ ಬಡ ಕುಟುಂಬದ ಮಕ್ಕಳು, ಹಂಪಿಯ ಆಕಾಶದಲ್ಲಿ ಹಾರಾಡುತ್ತಾ ಹಸಿರು ಸಿರಿಯನ್ನು ಕಂಡು ಮೈಮರೆತರು. ಆಕಾಶದ ಎತ್ತರಕ್ಕೆ ಹಾರಿದ ಮಕ್ಕಳ ಹರ್ಷೋದ್ಗಾರಕ್ಕೆ ಪಾರವೇ ಇರಲಿಲ್ಲ. ಈ ಮೂಲಕ ಸಚಿವರು ಹಂಪಿ ಉತ್ಸವದ ಸಂಭ್ರಮವನ್ನು ಜನಸಾಮಾನ್ಯರ ಹಾಗೂ ಮಕ್ಕಳ ಮನೆಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !