ರೈತರ ಜೀವನಾಡಿ ತುಂಗಭಧ್ರೆ ಒಡಲು ಖಾಲಿ, ಶೇ.2.5ರಷ್ಟೂ ನೀರಿಲ್ಲ!

ಮಂಜುನಾಥ ಗಂಗಾವತಿ

ಕೊಪ್ಪಳ: ನಾಲ್ಕು ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್ಗೆ ತಲುಪಿದ್ದು, ಜಲಾಶಯ ಸಾಮರ್ಥ್ಯದ ಶೇ. 2.5ರಷ್ಟು ನೀರಿಲ್ಲ!

ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಯ ಜಮೀನುಗಳಿಗೆ ನೀರುಣಿಸುವ ತುಂಗಭದ್ರಾ ಜಲಾಶಯದಲ್ಲಿ ಇದೀಗ ಕೇವಲ 3.02 ಟಿಎಂಸಿ ನೀರು ಮಾತ್ರವಿದೆ. ಇನ್ನೆರಡು ವಾರದಲ್ಲಿ ಮಳೆಯಾಗದಿದ್ದರೆ, ಎಲ್ಲ ಜಿಲ್ಲೆಗಳಿಗೂ ನೀರಿನ ಹಾಹಾಕಾರ ಶುರುವಾಗಲಿದೆ.
ರಾಜ್ಯದ ಹಲವು ಕಡೆ ಮಳೆಯಾಗಿರುವುದು ಎಲ್ಲರಿಗೂ ತಿಳಿದದ್ದೇ. ಅಲ್ಲಿ ಮಳೆಯಾಗುತ್ತದೆ, ಇಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ಹೊರಡಿಸುತ್ತಿರುವುದನ್ನು ನೋಡಿದ್ದೇವೆ. ಆದರೆ, ವರುಣ ದೇವನ ಕೃಪೆ ತುಂಗಭದ್ರಾ ಒಡಲಲ್ಲಿ ಆಗುತ್ತಿಲ್ಲ.

ಕಳೆದ ವರ್ಷ ಜುಲೈ ಮೊದಲ ವಾರದಲ್ಲೊ ಜಲಾಶಯದಲ್ಲಿ 47ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ಬಾರಿ 3.02 ಟಿಎಂಸಿ ನೀರು ಸಂಗ್ರಹವಿದೆ. ತುಂಗಭದ್ರಾ ಜಲಾಶಯಕ್ಕೆ ಒಟ್ಟು 105 ಟಿಎಂಸಿ ಸಂಗ್ರಹ ಮಾಡುವ ಸಾಮರ್ಥ್ಯವಿದೆ. ಆದರೆ ಈ ಬಾರಿ ನೀರಿನ ಅಭಾವ ಭಯದ ವಾತಾವರಣ ಸೃಷ್ಟಿಸಿದೆ.

ಒಳಹರಿವು ಕಡಿಮೆ: ಕಳೆದ ವರ್ಷ ಈ ಹೊತ್ತಿಗೆ ಸಾವಿರಾರು ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಈ ಬಾರಿ 196 ಕ್ಯೂಸೆಕ್ ನೀರು ಬರುತ್ತಿದೆ. ಕೆಲ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದ್ದು, ಇನ್ನೆರಡು ವಾರವಾದರೆ, ಶೇ. 50ರಷ್ಟು ಹಳ್ಳಿಗಳಿಗೆ ಟ್ಯಾಂಕರ್ ನೀರೇ ಗತಿ ಎಂಬ ಪರಿಸ್ಥಿತಿ ಉದ್ಭವವಾಗಿದೆ.

ಕುಡಿಯುವ ನೀರಿಗೆ ರೈತರ ಕನ್ನ
ರಾಯಚೂರು ಜಿಲ್ಲೆಯ ಜನರಿಗೆ ಕುಡಿಯಲು ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಬಿಡಲಾಗಿದೆ. ಗಂಗಾವತಿ ಭಾಗದಲ್ಲಿ ರೈತರು ಈ ನೀರನ್ನು ಭತ್ತ ನಾಟಿ ಮಾಡಲು ಬಳಕೆ ಮಾಡುತ್ತಿದ್ದಾರೆ. ಕುಡಿಯುವ ನೀರು ಪೋಲಾದರೂ, ಯಾವೊಬ್ಬ ಅಧಿಕಾರಿ ಯಾವುದೇ ಕ್ರಮಕೈಗೊಂಡಿಲ್ಲ. ರಾಜಾರೋಷವಾಗಿ ರೈತರು ಭತ್ತ ನಾಟಿಗೆ ನೀರನ್ನು ಹರಿಸಿಕೊಳ್ಳುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ. ಇನ್ನು ಜಲಾಶಯದಲ್ಲಿ ಕುಡಿಯುವ ನೀರಿಗೆ ಮೀಸಲಿಟ್ಟ ನೀರು ಕಾರ್ಖಾನೆ ಪಾಲಾಗುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಮುಂದಿನ 15 ದಿನಗಳವರೆಗೆ ನೀರಿನ ಸಮಸ್ಯೆ ಇಲ್ಲ. ಜಲಾಶಯದ ನೀರನ್ನು ಗಂಗಾವತಿ, ಕೊಪ್ಪಳ ತಾಲೂಕುಗಳ ಕೆಲ ಗ್ರಾಮಗಳು ಅವಲಂಬಿಸಿವೆ. ನೀರಿನ ಸಮಸ್ಯೆ ಆಗದಂತೆ ಜಿಪಂ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!