ಹೊಸದಿಗಂತ ವರದಿ ಹುಬ್ಬಳ್ಳಿ:
ಸಾಲ ಮರುಪಾತಿ ನೋಟಿಸ್‌ನಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರೈತ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನವಲಗುಂದ ತಾಲ್ಲೂಕಿನ ಕೆವಿಜಿ ಬ್ಯಾಂಕ್ ಮೊರಬ ಶಾಖೆಯ ಅಕಾರಿಗಳು ಸಾಲ ಮರು ಪಾವತಿಸುವಂತೆ ನೋಟಿಸ್ ನೀಡಿದ್ದರಿಂದ ಅಸ್ವಸ್ಥಗೊಂಡಿದ್ದ ಗುಮ್ಮಗೋಳ ಗ್ರಾಮದ ರೈತ ಮಹಾದೇವಪ್ಪ ಜಾವೂರ ಗುರುವಾರ ಮೃತಪಟ್ಟಿದ್ದಾರೆ.
ಅವರ ಸಾವಿಗೆ ಕೆವಿಜಿ ಬ್ಯಾಂಕ್ ಅಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿ ಮೃತರ ಕುಟುಂಬಸ್ಥರು, ರೈತರು ಆಸ್ಪತ್ರೆ ಶವಗಾರದ ಮುಂದೆ ಪ್ರತಿಭಟನೆ ನಡೆಸಿದರು.
ರೈತ ಮಹಾದೇವಪ್ಪ ಅವರ ಪುತ್ರರು, ‘ನಮ್ಮ ತಂದೆ ಅನಕ್ಷರಸ್ಥ. ಮೋಸದಿಂದ ಅವರ ಸಹಿ ಮಾಡಿಸಿಕೊಂಡು ಹಣ ಪಡೆದಿದ್ದಾರೆ’ ಈ ಕುರಿತು ಸಿಬ್ಬಂದಿ ಜೊತೆ ನಡೆದ ಜಗಳದಲ್ಲಿ ನಮ್ಮ ತಂದೆ ಅಸ್ವಸ್ಥಗೊಂಡು ಕುಸಿದು ಬಿದ್ದರು. ಕೂಡಲೇ ಅವರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಕಿಮ್ಸ್‌ಗೆ ದಾಖಲಿಸಲಾಗಿತ್ತು.
ಈ ಬಗ್ಗೆ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಕೆವಿಜಿ ಬ್ಯಾಂಕ್ ಮೊರಬ ಶಾಖೆಯ ವ್ಯವಸ್ಥಾಪಕ ಅಶ್ವಿನ್ ವಾಸನ್ ಅವರನ್ನು ಅ.25ರಂದು ಬಂಧಿಸಿದ್ದರು.