ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಗುಬ್ಬಲಾಳ ಮುಖ್ಯರಸ್ತೆಯಲ್ಲಿನ ಬೃಹತ್ ಗುಂಡಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ. ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ಸ್ಥಳೀಯರು, ಸಾಮಾಜಿಕ ಪ್ರಜ್ಞೆಯುಳ್ಳ ನಿವಾಸಿ ಗುಂಪು ಮತ್ತು ಮಾಜಿ ಕಾರ್ಪೊರೇಟರ್ ಇದಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಈ ನಿರ್ಣಾಯಕ ಜಂಕ್ಷನ್‌ನಲ್ಲಿ ವಾಹನ ಸವಾರರು ಈಗ ಸುರಕ್ಷಿತವಾಗಿ ಪ್ರಯಾಣಿಸಬಹುದು.
ಉತ್ತರಹಳ್ಳಿಯ ಗುಬ್ಬಲಾಳ ಮುಖ್ಯರಸ್ತೆ ಮತ್ತು ಪೈಪ್‌ಲೈನ್ ರಸ್ತೆಯ ಜಂಕ್ಷನ್‌ನಲ್ಲಿ ಇತ್ತೀಚೆಗೆ ಗುಂಡಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿತ್ತು ಎಂದು ಕನಕಪುರ ರಸ್ತೆಯ 80+ ವಸತಿ ಗುಂಪುಗಳ ಒಕ್ಕೂಟದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಯಾರೋ ಭಾನುವಾರ ರಸ್ತೆ ಗುಂಡಿಯ ಮೇಲೆ ಶಿಥಿಲವಾದ, ಬಿದಿರಿನ ಸೋಫಾವನ್ನು ತಂದು ಇರಿಸಿದ್ದಾರೆ, ಇದರಿಂದಾಗಿ ಸಾರ್ವಜನಿಕರು ಆ ಸ್ಥಳದಲ್ಲಿ ಉಂಟಾಗಬಹುದಾದ ಅಪಾಯ ತಪ್ಪಿಸಬಹುದು ಹಾಗೂ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ.. ಈ ಜಂಕ್ಷನ್ ವಿಶೇಷವಾಗಿ ರಾತ್ರಿ ಸಮಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಏಕೆಂದರೆ ಈ ಪ್ರದೇಶದಲ್ಲಿ ಸರಿಯಾಗಿ ಬೆಳಕಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಅದರ ಕೆಳಗೆ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ರಸ್ತೆ ಈ ಸ್ಥಿತಿ ತಲುಪಿದೆ.