ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ.
ಉತ್ತರ ಪ್ರದೇಶದ 16 ಸ್ಥಾನಗಳಿಗೆ ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಅಖಿಲೇಶ್ ಯಾದವ್ ಪತ್ನಿ ಮೈನ್ಪುರಿಯಿಂದ ಸ್ಪರ್ಧಿಸುತ್ತಿದ್ದಾರೆ.
ಬದೌನ್ ಕ್ಷೇತ್ರದಿಂದ ಧರ್ಮೇಂದ್ರ ಯಾದವ್, ಖೇರಿ ಕ್ಷೇತ್ರದಿಂದ ಉತ್ಕರ್ಷ ವರ್ಮಾ, ಫಿರೋಜಾಬಾದ್ ಕ್ಷೇತ್ರದಿಂದ ಅಕಾಶ್ ಯಾದವ್, ದೌರಾಹ್ರ ಕ್ಷೇತ್ರದಿಂದ ಆನಂದ್ ಬದೋರಿಯಾ, ಉನ್ನಾವೋ ಕ್ಷೇತ್ರದಿಂದ ಅನ್ನು ಟಂಡನ್, ಫೈಜಾಬಾದ್ ಕ್ಷೇತ್ರದಿಂದ ಅವಧೇಶ್ ಪ್ರಸಾದ್, ಗೋರಖಪುರ ಕ್ಷೇತ್ರದಿಂದ ಕಾಜಲ್ ನಿಶಾದ್, ಬಸ್ತಿ ಕ್ಷೇತ್ರದಿಂದ ರಾಮಪ್ರಸಾದ್ ಚೌಧರಿ, ಬಾಂಡಾ ಕ್ಷೇತ್ರದಿಂದ ಶಿವಶಂಕರ್ ಸಿಂಗ್ ಪಟೇಲ್, ಅಂಬೇಡ್ಕರ್ ನಗರ ಕ್ಷೇತ್ರದಿಂದ ಲಾಲ್ಜಿ ವರ್ಮಾ, ಲಖನೌನಿಂದ ರವಿದಾಸ್ ಮೆಹರೋತ್ರ, ಫಾರುಖಾಬಾದ್ ಕ್ಷೇತ್ರದಿಂದ ಡಾ. ನವಲ್ ಕಿಶೋರ್ ಶಕ್ಯಾ, ಅಕ್ಬರಪುರ ಕ್ಷೇತ್ರದಿಂದ ರಾಜಾ ರಾಮ್ ಪಾಲ್ ಸ್ಪರ್ಧಿಸುತ್ತಿದ್ದಾರೆ.
ಒಟ್ಟು 16 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಘೋಷಣೆ ಮಾಡಲಾಗಿದೆ. ಇಂಡಿಯಾ ಮೈತ್ರಿ ಕೂಟದ ಪ್ರಮುಖ ಪಕ್ಷವಾಗಿರುವ ಸಮಾವದವಾದಿ ಪಾರ್ಟಿ ಇತ್ತೀಚೆಗಷ್ಟೇ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಸಿತ್ತು. ಇದರ ಬೆನ್ನಲ್ಲೇ 16 ಸ್ಥಾನಗಳಿಗೆ ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳನ್ನು ಘೋಷಿಸಿದೆ.
ಕೆಲ ಕ್ಷೇತ್ರಗಳನ್ನು ಕಾಂಗ್ರೆಸ್ ತನಗೆ ಬಿಟ್ಟುಕೊಡುವಂತೆ ಕೇಳಿಕೊಂಡಿತ್ತು. ಆದರೆ ಸಮಾಜವಾದಿ ಪಾರ್ಟಿ ಒಪ್ಪಿಲ್ಲ. ಈ ಪೈಕಿ ಫಾರುಖಾಬಾದ್ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿ ನವಲ್ ಕಿಶೋರ್ ಶಕ್ಯಾಗೆ ಟಿಕೆಟ್ ನೀಡಿದೆ. ಆದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳಿಕೊಂಡಿತ್ತು. ಆದರೆ ಕಾಂಗ್ರೆಸ್ ಮನವಿ ನಡುವೆಯೂ ಫಾರುಖಾಬಾದ್ಗೆ ಅಭ್ಯರ್ಥಿ ಘೋಷಿಸುವ ಮೂಲಕ ಇಂಡಿಯಾ ಮೈತ್ರಿಯಲ್ಲಿ ಮತ್ತೊಂದು ಅಸಮಾಧಾನಕ್ಕೆ ಕಾರಣವಾಗಿದ್ದಾರೆ.