ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಲೋಕಸಭಾ ಚುನಾವಣೆಗೆ ತನ್ನ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, 16 ರಾಜ್ಯಗಳ 195 ಕ್ಷೇತ್ರಗಳಿಗೆ ಅಭ್ಯರ್ಥಿಯ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.
ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡಲಿದ್ದಾರೆ ಎಂದು ಘೋಷಣೆಯಾಗಿದೆ. ಮೊದಲ ಪಟ್ಟಿಯಲ್ಲಿ ಕೇಂದ್ರ ಸಚಿವ ಸಂಪುಟದ 34 ಸಚಿವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೂ ಟಿಕೆಟ್ ಘೋಷಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ವಿನೋದ್ ತಾವ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗಿಲ್ಲ.
16 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಕ್ಕೆ ಟಿಕೆಟ್ ಘೋಷಣೆ ಮಾಡಲಾಗಿದೆ. 34 ಕೇಂದ್ರ ಸಚಿವರೊಂದಿಗೆ, 28 ಮಹಿಳಾ ಅಭ್ಯರ್ಥಿಗಳಿಗೂ ಟಿಕೆಟ್ ಘೋಷಿಸಲಾಗಿದೆ. 47 ಯುವಕರು, 27 ಎಸ್‌ಸಿ, 18 ಎಸ್‌ಸಿ ಹಾಗೂ 57 ಹಿಂದುಳಿದ ವರ್ಗಗಳ ವ್ಯಕ್ತಿಗೆ ಟಿಕೆಟ್ ಘೋಷಿಸಲಾಗಿದೆ. ರಾಜ್ಯವಾರು ಪ್ರಕಾರ ಉತ್ತರ ಪ್ರದೇಶದಲ್ಲಿ 51, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 24, ಗುಜರಾತ್, ರಾಜಸ್ಥಾನ 15, ಕೇರಳ 12, ತೆಲಂಗಾಣ 9, ಜಾರ್ಖಂಡ್ 11, ದೆಹಲಿ 5, ಉತ್ತರಾಖಂಡ 3 ಹಾಗೂ ಗೋವಾದ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ
ದೆಹಲಿ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿಗೆ ಟಿಕೆಟ್ ನಿರಾಕರಿಸಲಾಗಿದೆ. ಸುಷ್ಮಾ ಸ್ವರಾಜ್ ಪುತ್ರಿಗೆ ಟಿಕೆಟ್ ನೀಡಲಾಗಿದ್ದು, ಭಾನ್ಸುರಿ ಸ್ವರಾಜ್ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ನ ಗಾಂಧಿನಗರದಿಂದ ಸ್ಪರ್ಧೆ ಮಾಡಲಿದ್ದಾರೆ.
ರಾಜ್ಯಸಭಾ ಅವಧಿ ಮುಗಿಸಿರುವ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಕೇರಳದ ತಿರುವನಂತಪುರದಿಂದ ಟಿಕೆಟ್ ನೀಡಲಾಗಿದೆ. ಅದರೊಂದಿಗೆ ಕಾಂಗ್ರೆಸ್‌ನ ಶಶಿ ತರೂರ್ ಹಾಗೂ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ರಾಜೀವ್ ಚಂದ್ರಶೇಖರ್ ಅವರ ನಡುವಿನ ಫೈಟ್ ಗಮನಸೆಳೆಯಲಿದೆ. ಕಾಸರಗೋಡು ಕ್ಷೇತ್ರದಿಂದ ಎಂಎಲ್ ಅಶ್ವಿನಿಗೆ ಟಿಕೆಟ್ ನೀಡಲಾಗಿದೆ.