ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಬ್ಬರು ವ್ಯಕ್ತಿಗಳು ಪ್ರೇಕ್ಷಕರ ಗ್ಯಾಲರಿಯಿಂದ ಕಲಾಪದ ಸ್ಥಳಕ್ಕೆ ಹಾರಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಲೋಕಸಭೆ ಕಲಾಪವನ್ನು ಮಧ್ಯಾಹ್ನ ಎರಡು ಗಂಟೆವರೆಗೆ ಮುಂದೂಡಲಾಗಿತ್ತು. ಮರುಕಲಾಪ ಆರಂಭಿಸುತ್ತಲೇ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ವಿಧ್ವಂಸ ಸೃಷ್ಟಿಸಿದವರ ಬಳಿ ಇದ್ದದ್ದು ಮಾರಣಾಂತಿಕ ವಸ್ತು ಆಗಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದರು.
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸೇರಿದಂತೆ ಹಲವರು ಭದ್ರತಾ ಲೋಪದ ಬಗ್ಗೆ ಚಿಂತೆ ಧ್ವನಿಸಿದರು. ಆ ಮಾತುಗಳನ್ನು ಕೇಳಿಸಿಕೊಂಡ ಸ್ಪೀಕರ್, “ಖಂಡಿತವಾಗಿಯೂ ನಿಮ್ಮೆಲ್ಲರ ಆತಂಕಕ್ಕೆ ಮನ್ನಣೆ ಇದೆ. ಕೆಲವು ಅಂಶಗಳನ್ನು ಸಾರ್ವಜನಿಕವಾಗಿ ಚರ್ಚಿಸಲಾಗುವುದಿಲ್ಲ. ಹೀಗಾಗಿ ಪ್ರತಿಪಕ್ಷ ನಾಯಕರನ್ನೆಲ್ಲ ಕೊಠಡಿಗೆ ಕರೆದು ಆ ಬಗ್ಗೆ ವಿವರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳುತ್ತೇನೆ. ಆದರೆ, ಈಗ ಸದನ ಎಂದಿನಂತೆ ನಡೆಯಬೇಕಾಗಿದೆ. 2001ರ ಉಗ್ರದಾಳಿ ನಡೆದ ನಂತರವೂ ಕಲಾಪವನ್ನು ಕೈಬಿಡಲಿಲ್ಲ. ನಮ್ಮ ಕರ್ತವ್ಯಗಳನ್ನು ಮಾಡಲೇಬೇಕಾಗುತ್ತದೆ. ಅದೇ ಸಮಯಕ್ಕೆ ಘಟನೆ ಕುರಿತ ಎಲ್ಲ ಆತಂಕಗಳಿಗೆ ಉತ್ತರ ದೊರಕಿಸಲಾಗುತ್ತದೆ” ಎಂದು ಭರವಸೆ ಕೊಟ್ಟರು.