ಹೊಸದಿಗಂತ ವರದಿ ಬೆಳಗಾವಿ:
ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ನಗರದ ಇಬ್ಬರು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಇಲ್ಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್ ಬಿರಾದಾರ ಅವರ ನಗರದಲ್ಲಿನ ಮನೆ ಸೇರಿದಂತೆ ವಿವಿಧೆಡೆ ಏಕ ಕಾಲದಲ್ಲಿ ದಾಳಿ ಮಾಡಲಾಗಿದೆ.
ಇಲ್ಲಿನ ವಿಶ್ವೇಶ್ವರ ನಗರದ ಶ್ರದ್ದಾ ಅಪಾರ್ಟ್‌ಮೆಂಟ್ ನಲ್ಲಿರುವ ಮನೆ ಹಾಗೂ ಅವರಿಗೆ ಸೇರಿದ ಖಾನಾಪುರ ಮತ್ತು ಕಿತ್ತೂರಿನಲ್ಲಿನ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗುಲ್ಬರ್ಗಾ ನಗರ ಯೋಜನಾ ಕಚೇರಿಯ ಅಪ್ಪಾಸಾಹೇಬ ಕಾಂಬಳೆ ಅವರ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.
ಲೋಕಾಯುಕ್ತ ಎಸ್.ಪಿ. ಹನಮಂತರಾಯ್ ನೇತೃತ್ವದಲ್ಲಿ ಡಿವಿಎಸ್ ಪಿ ಜಿ.ರಘು ಅವರ ತಂಡದಿಂದ ಈ ದಾಳಿ ನಡೆದಿದೆ.