ಹೊಸ ದಿಗಂತ ವರದಿ,ವಿಜಯಪುರ:
ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆ ಇಲ್ಲಿನ ಕರ್ನಾಟಕ ಗೃಹ ಮಂಡಳಿ ಕಚೇರಿ ಪ್ರಥಮ ದರ್ಜೆ ಸಹಾಯಕ ಶಿವಾನಂದ ಕೆಂಬಾವಿ ಈತನ ಎರಡು ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂ ಬೆಳಗ್ಗೆ ಏಕಾಏಕಿ ದಾಳಿ ನಡೆಸಿದ್ದು, 2.34 ಕೋಟಿ ರೂ.ಗಳ ಅಕ್ರಮ ಆಸ್ತಿ ಪತ್ತೆಯಾಗಿದೆ.
ನಗರದ ಸುಕೂನ್ ಕಾಲೋನಿಯಲ್ಲಿರುವ ಎಫ್‌ಡಿಎ ಶಿವಾನಂದ ಕೆಂಬಾವಿ ನಿವಾಸ ಹಾಗೂ ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದಲ್ಲಿ ಇರುವ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಡೀ ದಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ 2.34 ಕೋಟಿ ರೂ.ಗಳ ಅಕ್ರಮ ಆಸ್ತಿ, 15 ಲಕ್ಷ ನಗದು, ಚಿನ್ನ, ಬೆಳ್ಳಿ, ವಾಹನ ಸೇರಿ ಇತರೆ ಆಸ್ತಿಗಳ ದಾಖಲಾತಿಗಳು ಪತ್ತೆಯಾಗಿವೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುರೇಶ ರೆಡ್ಡಿ, ಸಿಪಿಐಗಳಾದ ಆನಂದ ಟಕ್ಕನ್ನವರ್, ಆನಂದ ಡೋಣಿ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.