ಹೊಸದಿಗಂತ ಬೆಳಗಾವಿ:
ರೈತರ ಕೆಲಸ ಮಾಡಿಕೊಡಲು ಲಂಚಕ್ಕೆ ಕೈಯೊಡ್ಡಿದ್ದ ರಾಯಬಾಗ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಪಹಣಿ ಪತ್ರದಲ್ಲಿದ್ದ ನಿರ್ಬಂಧ ತೆರವುಗೊಳಿಸಲು 80 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಚೇರಿ ಸಿಬ್ಬಂದಿ ಚಂದ್ರಮಪ್ಪ ಮೋರಟಗಿ ಎಂಬುವವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಸವಸುದ್ದಿ ಗ್ರಾಮದ ರೈತ ಶಿವಾನಂದ ದುಂಡಗಿ ಅವರ ಅಜ್ಜನಿಗೆ 1974ರಲ್ಲಿ ಭೂ ನ್ಯಾಯಮಂಡಳಿ ಆದೇಶದಂತೆ ಜಮೀನು ಮಂಜೂರಾಗಿತ್ತು. ಈ ಜಮೀನನ್ನು 15 ವರ್ಷಗಳವರೆಗೆ ಮಾರಾಟ ಮಾಡಬಾರದೆಂಬ ನಿರ್ಬಂಧವಿತ್ತು. ಅವಧಿ ಮುಗಿದಿದ್ದರೂ ದಾಖಲೆಯಲ್ಲಿ ಈ ನಿರ್ಬಂಧ ಹಾಗೆಯೇ ಇತ್ತು. ಇದನ್ನು ತೆರವುಗೊಳಿಸಲು ಶಿವಾನಂದ ಅವರು ಕಚೇರಿಗೆ ಅಲೆದಾಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಸಿಬ್ಬಂದಿ ಚಂದ್ರಮಪ್ಪ, ಕೆಲಸ ಮಾಡಿಕೊಡಲು 80 ಸಾವಿರ ರೂ. ಬೇಡಿಕೆಯಿಟ್ಟಿದ್ದರು.
ಲಂಚ ನೀಡಲು ಇಷ್ಟವಿಲ್ಲದ ರೈತ ಶಿವಾನಂದ ಲೋಕಾಯುಕ್ತರ ಮೊರೆ ಹೋಗಿದ್ದರು. ಅದರಂತೆ, ಇಂದು ಹಣ ಸ್ವೀಕರಿಸುವಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲಚಂದ್ರ ಲಕ್ಕಮ್ಮ ಮತ್ತು ಗೋವಿಂದಗೌಡ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿಯಲ್ಲಿ ಸಿಬ್ಬಂದಿಗಳಾದ ರವಿ, ರಾಜು, ಸಂತೋಷ್, ಗಿರೀಶ್, ಅಭಿಜಿತ್ ಹಾಗೂ ಬಸವರಾಜ ಪಾಲ್ಗೊಂಡಿದ್ದರು. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



