ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಲಿದ್ದು, ದಗ್ದುಶೇಠ್ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅವರ ಭೇಟಿಯ ವೇಳೆ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ದೇಶದ ಪ್ರಗತಿಗೆ ಪ್ರಧಾನಿ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಇಂದು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದ್ದು, ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ ವ್ಯಕ್ತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರತಿ ವರ್ಷ ಆಗಸ್ಟ್ 1ರಂದು ಲೋಕಮಾನ್ಯ ತಿಲಕರ ಪುಣ್ಯತಿಥಿಯಂದು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆದವರ ಪೈಕಿ ಪ್ರಧಾನಿ ಮೋದಿ ಅವರು 41ನೇ ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ.
ಇಂದು ಮಧ್ಯಾಹ್ನ 12:45ಕ್ಕೆ ಪ್ರಧಾನಿ ಮೋದಿ ಮೆಟ್ರೋ ರೈಲಿಗೆ ಚಾಲನೆ ನೀಡಲಿದ್ದಾರೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪುಣೆ ಮೆಟ್ರೋ ಮೊದಲ ಹಂತದ ಎರಡು ಕಾರಿಡಾರ್ ನಲ್ಲಿ ಫುಗೆವಾಡಿ ನಿಲ್ದಾಣದಿಂದ ಸಿವಿಲ್ ಕೋರ್ಟ್ ಸ್ಟೇಷನ್ ಮತ್ತು ಗಾರ್ವೇರ್ ಕಾಲೇಜು ನಿಲ್ದಾಣದಿಂದ ರೂಬಿ ಹಾಲ್ ಕ್ಲಿನಿಕ್ ಸ್ಟೇಷನ್ ವರೆಗಿನ ಮೆಟ್ರೋ ರೈಲಿಗೆ ಇಂದು ಚಾಲನೆ ಸಿಗಲಿದೆ.