ಹೊಸದಿಗಂತ ಹಾಸನ :
ಒಂಟಿ ಸಲಗ ದಾಳಿ ಮಾಡಿದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿಯ ಬಾಳಗುಲಿಯಲ್ಲಿ ಶನಿವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ನಡೆದಿದೆ.
ಬೇಲೂರು ಅರೇಹಳ್ಳಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸೌದೆ ಮಾಡಲು ಮಲಸಾವರದ ಗಣೇಶ್ ಹಾಗೂ ಹಳೇ ಸಂತೆಮಾಳದ ನಿವಾಸಿ ಧರ್ಮೋಧರ ಬಾಳಗುಲಿಗೆ ತೆರಳಿ ಸೌದೆಯನ್ನು ಯಂತ್ರದ ಮೂಲಕ ತುಂಡರಿಸುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ.
ಇಬ್ಬರ ಮೇಲೆ ದಾಳಿ ಮಾಡಿದ ಬಳಿಕ ದೂರದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಉಲ್ಲಾಸ ನಗರದ ಕಾರ್ಮಿಕ ಮಹಿಳೆ ಪರಮೇಶ್ವರಿಯ ಮೇಲೆಯೂ ಸಹ ದಾಳಿ ನಡೆಸಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಬೇಲೂರು, ಸಕಲೇಶಪುರ ಆನೆ ಕಾರ್ಯಪಡೆ ಸಿಬ್ಬಂದಿಗಳು ಗಾಯಗೊಂಡವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.