– ನಾಗರಾಜ ಶೆಟ್ಟಿ
ಅಂಕೋಲಾ: ಕೃಷಿ ಮತ್ತು ಮೀನುಗಾರಿಕೆ ಪ್ರಧಾನವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ನಾಗದೇವರ ಆರಾಧನೆ ಬಹು ಹಿಂದಿನಿಂದಲೂ ನಡೆದು ಬಂದಿದ್ದು, ವೈಶಿಷ್ಟ್ಯಪೂರ್ಣ ನಾಗರ ಪಂಚಮಿ ಆಚರಣೆ ಕಂಡು ಬರುತ್ತದೆ.
ಈ ಭಾಗದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ರೈತ ಕುಟುಂಬಗಳಿಗೆ ಸೇರಿದ ನಾಗಸ್ಥಾನಗಳು ಇರುವುದು ಸಾಮಾನ್ಯ. ನಾಗರ ಪಂಚಮಿಯಂದೂ ಕುಟುಂಬದವರೆಲ್ಲ ಸೇರಿ ನಾಗದೇವರಿಗೆ ಶ್ರದ್ಧಾ ಭಕ್ತಿ ಪೂರ್ವಕ ಪೂಜೆ ಸಲ್ಲಿಸುತ್ತಾರೆ. ಪ್ರತಿಯೊಂದು ಗ್ರಾಮದೇವರ ಸನ್ನಿಧಿಯಲ್ಲಿ ನಾಗರಕಟ್ಟೆ, ನಾಗರ ಗುತ್ತುಗಳನ್ನು ಕಾಣಬಹುದಾಗಿದ್ದು, ನಾಗರ ಪಂಚಮಿ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಸುಳಿ ರೊಟ್ಟಿ ನೈವೇದ್ಯ
ನಾಗರ ಪಂಚಮಿ ನೈವೇದ್ಯಕ್ಕೆ ಸುಳಿ ರೊಟ್ಟಿ ತಯಾರಿಸುವುದು ವಿಶೇಷ. ಅಕ್ಕಿ ಹಿಟ್ಟಿನ ಹೊದಿಕೆಯಲ್ಲಿ ತೆಂಗಿನಕಾಯಿ ಸುಳಿ ಬೆಲ್ಲದಿಂದ ತಯಾರಿಸಿದ ಹೂರಣವನ್ನು ತುಂಬಿ ಅರಿಶಿನ ಎಲೆಯಲ್ಲಿ ಮಡಚಿ ಬೇಯಿಸಿ ತಯಾರಿಸುವ ಸುಳಿರೊಟ್ಟಿ ಅಥವಾ ಪಾತೋಳಿ ನಾಗದೇವರಿಗೆ ಇಷ್ಟವಾದ ಖಾದ್ಯ ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ.
ಅದೇ ರೀತಿ ನಾಗರ ಪೂಜೆಗೆ ಕೇದಿಗೆ ಹೂವನ್ನು ಮುಖ್ಯವಾಗಿ ಬಳಸಲಾಗುತ್ತದೆ. ತೆಂಗಿನ ಗರಿಯಿಂದ ಮಡ್ಲ ಹಾವು ತಯಾರಿಸಿ ನಾಗ ದೇವರ ಸನ್ನಿಧಿಯಲ್ಲಿ ಇಟ್ಟು ಪೂಜಿಸಲಾಗುತ್ತದೆ.
ಫಸಲಿನ ರಕ್ಷಕ
ರೈತರಿಗೆ ತಾವು ಬೆಳೆಯುವ ಬೆಳೆಯೇ ದೊಡ್ಡ ಸಂಪತ್ತಾಗಿದ್ದು, ನಾಗದೇವರು ತಾವು ಬೆಳೆಯುವ ಬೆಳೆಯ ರಕ್ಷಕ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿದೆ. ತಮ್ಮ ಜಮೀನುಗಳಲ್ಲಿ ನಾಗರ ಹಾವು ಕಂಡು ಬಂದರೆ ಅದಕ್ಕೆ ನೋವುಂಟು ಮಾಡುವ ಕೆಲಸ ರೈತರಿಂದ ಎಂದಿಗೂ ನಡೆಯುವುದಿಲ್ಲ. ಸಂತಾನ ದಯ ಪಾಲಿಸುವ ದೇವರೆಂದು ನಾಗರ ಆರಾಧನೆ ನಡೆಯುತ್ತದೆ.