ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದ್ದು, ಪಂದ್ಯ ನಿರ್ಣಾಯಕ ಹಂತಕ್ಕೇರಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 58 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 135 ರನ್ ಬೇಕಾಗಿದೆ.
ಭಾರತಕ್ಕೆ ಗುರಿಯಾಗಿ ನಿಗದಿಯಾದ 193 ರನ್‌ಗಳ ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ನೀಡಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾಗಿ ಆಘಾತ ನೀಡಿದರೆ, ಕರುಣ್ ನಾಯರ್ ಹಾಗೂ ಕೆಎಲ್ ರಾಹುಲ್ 36 ರನ್‌ಗಳ 2ನೇ ವಿಕೆಟ್ ಜೊತೆಯಾಟವನ್ನ ಸಾಧಿಸಿದರು. ಆದರೆ ಕರುಣ್ 14 ರನ್ ಗಳಿಸಿ ಔಟಾಗಿ ತಮ್ಮ ಸತತ 6ನೇ ವೈಫಲ್ಯ ದಾಖಲಿಸಿದರು.
ನಂತರ ಬಂದ ನಾಯಕ ಶುಭ್‌ಮನ್ ಗಿಲ್ ಕೇವಲ 6 ರನ್ ಗಳಿಸಿ ಎಲ್‌ಬಿಡಬ್ಲ್ಯೂ ಆದರು. ಗಿಲ್ 3-4 ಓವರ್ ನಂತರ ಮಾತ್ರ ಬ್ಯಾಟಿಂಗ್‌ಗೆ ಬಂದಿದ್ದು, ಅಭಿಮಾನಿಗಳಲ್ಲಿ ಆಶ್ಚರ್ಯ ಉಂಟುಮಾಡಿತು. ನೈಟ್ ವಾಚ್‌ಮನ್ ಆಗಿ ಬಂದ ಆಕಾಶ್ ದೀಪ್ ಕೂಡ ಕೇವಲ 1 ರನ್ ಗೆ ಬೌಲ್ಡ್ ಆಗಿ ವಿಕೆಟ್ ಕಳೆದುಕೊಂಡರು.
ಸುಂದರ್ ಮತ್ತು ಬುಮ್ರಾ ಭರ್ಜರಿ ದಾಳಿಗೆ ಇಂಗ್ಲೆಂಡ್ ಕುಸಿತ
ಇಂಗ್ಲೆಂಡ್ ಇನ್ನಿಂಗ್ಸ್ ಅನ್ನು ತೀವ್ರವಾಗಿ ಕೆಡವಿದವರು ಭಾರತದ ಬೌಲರ್‌ಗಳೇ. ದಿನದ ಆರಂಭದಲ್ಲೇ ಮೊಹಮ್ಮದ್ ಸಿರಾಜ್ 12 ರನ್ ಗಳಿಸಿದ್ದ ಬೆನ್ ಡಕೆಟ್ ಅವರನ್ನು ಔಟ್ ಮಾಡಿ ಮೊದಲ ಬೇಟೆ ನೀಡಿದರು. ಒಲ್ಲಿ ಪೋಪ್ 4 ರನ್ ಗೆ ಎಲ್‌ಬಿಡಬ್ಲ್ಯೂ ಆದರೆ, ಕ್ರಾಲೆ 22 ರನ್ ಗಳಿಸಿ ನಿತೀಶ್ ರೆಡ್ಡಿಗೆ ವಿಕೆಟ್ ನೀಡಿದರು. ಬ್ರೂಕ್ 23 ರನ್ ಹಾಗೂ ರೂಟ್ 40 ರನ್ ಗಳಿಸಿ ಸಣ್ಣ ಪ್ರತಿರೋಧ ಒದಗಿಸಿದರೂ, ಸುಂದರ್ ಅವರ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಪತನ ಕಂಡಿತು.
ಭಾರತದ ಪರ ವಾಷಿಂಗ್ಟನ್ ಸುಂದರ್ 22 ರನ್ ನೀಡಿ 4 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಸಿರಾಜ್ 2, ಬುಮ್ರಾ 2, ಆಕಾಶ್ ದೀಪ್, ನಿತೀಶ್ ರೆಡ್ಡಿ ತಲಾ 1 ವಿಕೆಟ್ ಪಡೆದರು. ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 62 ಓವರ್‌ಗಳಲ್ಲಿ 192 ರನ್ ಗೆ ಆಲೌಟ್ ಆಯಿತು.