ಹೊಸದಿಗಂತ ವರದಿ ಸುಂಟಿಕೊಪ್ಪ:
ಬ್ರೇಕ್ ಫೇಲ್ ಆದ ಕಾರಣ ಲಾರಿಯೊಂದು ಕಾರಿಗೆ ಡಿಕ್ಕಿಯಾದ ಪರಿಣಾಮ ಮುಂಬೈ ಮೂಲದ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮಡಿಕೇರಿ ಕಡೆಯಿಂದ ಸುಂಟಿಕೊಪ್ಪದತ್ತ ಬರುತ್ತಿದ್ದ ಕಾರು ಮತ್ತು ಸುಂಟಿಕೊಪ್ಪದಿಂದ ಮಡಿಕೇರಿಯತ್ತ ತೆರಳುತ್ತಿದ್ದ ಲಾರಿಯ ನಡುವೆ ಡಿಕ್ಕಿ ಸಂಭವಿಸಿದೆ. ಪಟ್ಟಣದ ವಂದನಾ ಬಾರ್ ಬಳಿ ರಾತ್ರಿ 9ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಅಪಘಾತದ ಭೀಕರ ದೃಶ್ಯ ಬಾರ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರಿನಲ್ಲಿದ್ದ ಮಹಿಳೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೆ, ಆಕೆಯ ಪತಿ ಮತ್ತು ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆನ್ನಲಾಗಿದೆ.
ವಂದನಾ ಬಾರ್ ರಸ್ತೆಯ ಎದುರಿನಲ್ಲಿ ನಿಲ್ಲಿಸಿದ್ದ ಮೂರ್ನಾಲ್ಕು ಸ್ಕೂಟರ್, ಬೈಕುಗಳಿಗೂ ಲಾರಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಸ್ಕೂಟರ್ ಕಾರುಗಳು ನಜ್ಜುಗುಜ್ಜಾಗಿವೆ.