ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಲ್ ದರ ಏರಿಕೆ ಟೋಲ್ ಶುಲ್ಕ ಹೆಚ್ಚಳ, ಆರ್ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಇಂದು ಮಧ್ಯರಾತ್ರಿಯಿಂದಲೇ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ನೀಡಿದೆ.
ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಮಧ್ಯರಾತ್ರಿಯಿಂದಲೇ ಸೇವೆ ಬಂದ್ ಮಾಡಲಿದ್ದು, ಹಲವು ಸೇವೆಗಳಿಗೆ ಬಿಸಿ ತಟ್ಟಲಿದೆ. 6 ತಿಂಗಳಲ್ಲಿ ಸರ್ಕಾರ 2ಬಾರಿ ಡಿಸೇಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರ ಗಡುವು ಕೊಟ್ಟಿದ್ದರು. ಆದರೆ, ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ. ಪರಿಣಾಮವಾಗಿ ಮಂಗಳವಾರದಿಂದ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ.
ಲಾರಿ ಮುಷ್ಕರದ ಕಾರಣ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜತೆಗೆ, ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಆಚರಿಸಲಿವೆ. ಬೇರೆ ರಾಜ್ಯಗಳ ಲಾರಿಗಳಿಗೂ ಪ್ರವೇಶವಿಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಏಪ್ರಿಲ್ 15ರಂದು ಒಂದು ದಿನ ಏರ್ಪೋರ್ಟ್ ಟ್ಯಾಕ್ಸಿಯನ್ನು ರಸ್ತೆಗಿಳಿಸದಿರಲು ಏರ್ಪೋರ್ಟ್ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ನಿರ್ಧರಿಸಿದೆ. ಆದರೆ, ಅನಿರ್ಧಿಷ್ಠಾವಧಿ ಮುಷ್ಕರದ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದಾರೆ. ಒಟ್ಟಾರೆಯಾಗಿ, ಸರಕು ಸಾಗಾಟ ಬಂದ್ ಆದರೆ ದಿನಬಳಕೆ ವಸ್ತುಗಳ ಮೇಲೆ ಬಿಸಿ ತಟ್ಟಲಿದೆ. ಹೀಗಾಗಿ, ಸರ್ಕಾರ ಯಾವ ರೀತಿ ಲಾರಿ ಮಾಲೀಕರ ಮನವೊಲಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.