ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನವರಿ 22 ರಂದು ಅಯೋದ್ಯೆಯ ರಾಮ ಮಂದಿರದಲ್ಲಿ (Ram mandir) ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಆಗಲಿದ್ದು, ಈ ಹಿನ್ನೆಲೆ ಬಿಜೆಪಿ ಪಾಟ್ನಾ ಕಚೇರಿಯಿಂದ ಅಯೋಧ್ಯೆಗೆ 20 ದಿನಗಳ “ಲವ್-ಕುಶ್ ಯಾತ್ರೆ” (Luv-Kush Yatra) ಪ್ರಾರಂಭಿಸಿದೆ.
ಇಂದು (ಮಂಗಳವಾರ) ಈ ಯಾತ್ರೆ ಆರಂಭವಾಗಿದ್ದು ರಾಮಮಂದಿರದಲ್ಲಿ ವಿಗ್ರಹದ ಪ್ರತಿಷ್ಠಾಪನೆ ಮತ್ತು ಬಿಹಾರದ (Bihar) ರಾಜಕೀಯ ಭಾಷೆಯಲ್ಲಿ “ಲವ್-ಕುಶ್” ಎಂದು ಕರೆಯಲ್ಪಡುವ ಕೊಯೆರಿ (ಕುಶ್ವಾಹಾ) ಮತ್ತು ಕುರ್ಮಿಗಳ ಪ್ರಭಾವಿ ಕೃಷಿಕ ಜಾತಿಗಳನ್ನು ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯೊಂದಿಗೆ “ಲವ್-ಕುಶ್ ಯಾತ್ರೆ” ಮುಕ್ತಾಯಗೊಳ್ಳಲಿದೆ.
ಲವ್-ಕುಶ್ ನ ಮಹತ್ವವೇನು?
ಲವ್ ಮತ್ತು ಕುಶ್ ಹಿಂದೂ ದೇವತೆಗಳಾದ ರಾಮ ಮತ್ತು ಸೀತೆಯ ಪುತ್ರರು. ಬಿಹಾರದಲ್ಲಿ ಇದು ಕೊಯೆರಿ (ಕುಶ್ವಾಹ) ಮತ್ತು ಕುರ್ಮಿ ಕೃಷಿ ಜಾತಿಗಳ ನಡುವಿನ ಮೈತ್ರಿಗೆ ರಾಜಕೀಯ ಪದವಾಗಿದೆ.
ಮಂಗಳವಾರ ಪಾಟ್ನಾದಿಂದ ಯಾತ್ರೆ ಆರಂಭವಾಗಿದೆ. ಬಿಜೆಪಿಯ ಕಾರ್ಯಕರ್ತರು ರಾಮ ಮತ್ತು ಸೀತೆಯ ಕಥೆಗೆ ಸಂಬಂಧಿಸಿದ ಜಿಲ್ಲೆಗಳ ಮೂಲಕ ಮತ್ತು ಕುರ್ಮಿ- ಕೊಯೆರಿ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಗಳಲ್ಲಿ ಸಂಚರಿಸುತ್ತಾರೆ. ಪಕ್ಷದ ಬಿಹಾರ ಅಧ್ಯಕ್ಷ ಸಾಮ್ರಾಟ್ ಚೌಧರಿ ಯಾತ್ರೆಗೆ ಚಾಲನೆ ನೀಡಿದರು. ಕೊಯೆರಿ -ಕುರ್ಮಿ ಜಾತಿಯ ಎಲ್ಲಾ ಸ್ಥಳೀಯ ಮುಖಂಡರು ಮತ್ತು ಸಂಸದರು ಮತ್ತು ಶಾಸಕರು ಸೇರಿದಂತೆ ಸ್ಥಳೀಯ ಪ್ರತಿನಿಧಿಗಳು ಯಾತ್ರೆಯ ಒಂದು ಭಾಗವಾಗಿ ಪಾಲ್ಗೊಳ್ಳುವ ರೀತಿಯಲ್ಲಿ ಯಾತ್ರೆಯನ್ನು ಆಯೋಜಿಸಲಾಗಿದೆ.
ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಹಲವಾರು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳನ್ನು ಪಕ್ಷ ಆಹ್ವಾನಿಸಿದೆ. ಯಾತ್ರೆಯು ಎರಡು ರಥಗಳನ್ನು ಹೊಂದಿದ್ದು ಪ್ರತಿಯೊಂದೂ ‘ಹವನ ಕುಂಡ’ವನ್ನು ಹೊಂದಿದೆ. ಯಾತ್ರೆಯಲ್ಲಿ ‘ಸಬ್ ಕೇ ಸಿಯಾ, ಸಬ್ ಕೇ ರಾಮ್’ ಎಂಬ ಘೋಷಣೆ ಮೊಳಗಲಿದೆ.
ಲವ್-ಕುಶ್ ಯಾತ್ರೆ ಎಲ್ಲೆಲ್ಲಿ ಸಂಚರಿಸಲಿದೆ?
ವೈಶಾಲಿ, ಸೀತಾಮರ್ಹಿ, ವಾಲ್ಮೀಕಿ ನಗರ, ಪೂರ್ಣಿಯಾ, ಕಿಶನ್‌ಗಂಜ್, ಕತಿಹಾರ್, ನಾವಡಾ, ನಳಂದ ಮತ್ತು ಬಕ್ಸರ್ ಮೂಲಕ ಹಾದು ಹೋಗುವ ಯಾತ್ರೆಯ ಸಮಯದಲ್ಲಿ ನೆರೆಯ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮುಕ್ತಾಯಗೊಳ್ಳುವ ಮೊದಲು ಬಿಜೆಪಿ ಹವನಗಳು ಮತ್ತು ಸಾರ್ವಜನಿಕ ಸಭೆಗಳನ್ನು ಯೋಜಿಸಿದೆ.