ಪ್ರೀತಿ ನಿರಾಕರಿಸಿದ ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ!

ಹೊಸ ದಿಗಂತ ವರದಿ, ಮಂಡ್ಯ :

ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದ ಮಂಡ್ಯ ವೈದ್ಯಕೀಯ ಕಾಲೇಜು ಆವರಣದಲ್ಲಿ ನಡೆದಿದೆ.
ತಾಲೂಕಿನ ವೈ. ಯರಹಳ್ಳಿಘಿ ಗ್ರಾಮದ ನವ್ಯ (20) ಎಂಬಾಕೆಯೇ ಪಾಗಲ್ ಪ್ರೇಮಿಯಿಂದ ಹಲ್ಲೆಗೊಳಗಾದವಳಾಗಿದ್ದಾಳೆ. ಈಕೆಯ ಮೇಲೆ ಅದೇ ಗ್ರಾಮದ ಪರಮೇಶ್ (23) ಎಂಬಾತ ಹಲ್ಲೆ ನಡೆಸಿದ್ದಾನೆ.
ಘಟನೆ ವಿವರ :
ತಾಲೂಕಿನ ವೈ. ಯರಹಳ್ಳಿ ಗ್ರಾಮದ ನವ್ಯ ಮಿಮ್ಸ್‌ನಲ್ಲಿ ಎಂಆರ್‌ಡಿ ವಿಭಾಗದಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಳು. ಅದೇ ಗ್ರಾಮದ ತಮ್ಮ ಸಂಬಂಧಿ ಪರಮೇಶ್ ಮತ್ತು ನವ್ಯ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಇತ್ತೀಚೆಗೆ ಕೆಲ ಕಾರಣಗಳಿಂದಾಗಿ ನವ್ಯ ಪರಮೇಶ್‌ನನ್ನು ದೂರ ಇಟ್ಟಿದ್ದಳು. ಆತನ ಪ್ರೀತಿಯನ್ನು ನಿರಾಕರಿಸಿದ್ದಳೆನ್ನಲಾಗಿದೆ. ಇದರಿಂದ ಕುಪಿತಗೊಂಡ ಪರಮೇಶ್ ಪಾರಾಮೆಡಿಕಲ್ ಕಲಿಯಲು ಮಿಮ್ಸ್‌ಗೆ ಬಂದಿದ್ದ ನವ್ಯಳ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದ.
ಆಸ್ಪತ್ರೆ ಮುಂಭಾಗದಲ್ಲಿರುವ ಕ್ಯಾಂಟೀನ್‌ನಲ್ಲೇ ಊಟ ತಿಂಡಿ ಸೇವಿಸಿದ್ದ ಪರಮೇಶ, ಕಾಲೇಜು ಆವರಣದಲ್ಲೇ ಓಡಾಡಿಕೊಂಡು ಆಕೆಯ ಬರುವಿಕೆಯನ್ನು ಕಾಯುತ್ತಿದ್ದ. ನಂಬರ್‌ಪ್ಲೇಟ್ ಇಲ್ಲದ ಡಿಯೋ ಸ್ಕೂಟರ್‌ನಲ್ಲಿ ಬಂದಿದ್ದ ಪರಮೇಶ ಕಾಲೇಜು ಆವರಣದಲ್ಲಿ ರಿಪೀಸ್ ಪಟ್ಟಿಗೆ ಚೂಪಾದ ಮೊಳೆಯನ್ನು ಹೊಡೆದು ತನ್ನ ಬಳಿ ಇಟ್ಟುಕೊಂಡು ಕಾದಿದ್ದ. ಸಂಜೆ ಸುಮಾರು 4.15ರ ಸಮಯದಲ್ಲಿ ನವ್ಯ ತನ್ನ ಸ್ನೇಹಿತೆಯರೊಂದಿಗೆ ಬರುತ್ತಿದ್ದುದ್ದನ್ನು ಕಂಡ ಪರಮೇಶ ಆಕೆಯನ್ನು ಎಳೆದು ಬೇಲಿಯ ಮೇಲೆ ಬೀಳಿಸಿ ತಲೆಗೆ ತಾನು ತಂದಿದ್ದ ರಿಪೀಸ್‌ಪಟ್ಟಿಯಿಂದ ಹಲ್ಲೆ ನಡೆಸಿದ್ದ.
ಘಟನೆಯನ್ನು ಕಂಡ ಇತರೆ ವಿದ್ಯಾರ್ಥಿಗಳು ತಕ್ಷಣ ಓಡಿಬಂದು ನವ್ಯಳನ್ನು ಆತನಿಂದ ರಕ್ಷಿಸಿದರಲ್ಲದೆ, ಪರಮೇಶ್‌ನನ್ನು ಹಿಗ್ಗಾ ಮುಗ್ಗಾ ಥಳಿಸಿ ನಂತರ ಪೊಲೀಸರಿಗೊಪ್ಪಿಸಿದರು.
ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ನವ್ಯಳಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ಯಲಾಯಿತು.
ಆರೋಪಿ ಪರಮೇಶ್‌ನನ್ನು ವಶಕ್ಕೆ ಪಡೆದ ಪೂರ್ವ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!