March 11, 2026
Wednesday, March 11, 2026
spot_img

ಎಲ್ ಪಿಜಿ ಬಿಕ್ಕಟ್ಟು: ಆದ್ಯತಾ ವಲಯಗಳ ಕೊರತೆ‌ ನೀಗಿಸಲು ಉತ್ಪಾದನೆ ಹೆಚ್ಚಿಸಿದ ರಿಲಾಯನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಮಹತ್ತರವಾದ ಘೋಷಣೆ ಮಾಡಿದ್ದು, ಜಾಮ್ ನಗರದ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್ ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧರಿಸಲಾಗಿದೆ.

ಜಾಮ್ ನಗರದಲ್ಲಿ ಇರುವ ಇದು ವಿಶ್ವದಲ್ಲಿಯೇ ಅತಿದೊಡ್ಡ ಸಂಯೋಜಿತ ಸಂಸ್ಕರಣೆ ಹಬ್ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. KG- D6 ಬ್ಲಾಕ್ ನಲ್ಲಿ ಉತ್ಪಾದನೆ ಆದಂಥ ಅನಿಲವನ್ನು ಆದ್ಯತೆ ವಲಯಗಳ ಕಡೆಗೆ ತಿರುಗಿಸಲಾಗುವುದು. ರಾಷ್ಟ್ರೀಯ ಇಂಧನ ಆದ್ಯತೆಗಳು ಹಾಗೂ ಸರ್ಕಾರಿ ಮಾರ್ಗದರ್ಶನದ ಅನ್ವಯ ಆದ್ಯತಾ ವಲಯಗಳಿಗೆ ಪೂರೈಕೆ ಬೆಂಬಲ ನೀಡುವುದಕ್ಕಾಗಿ ಮಹತ್ವದ ಘೋಷಣೆ ಮಾಡಿದೆ.

ಅಡೆತಡೆಯಿಲ್ಲದ ಇಂಧನ ಪೂರೈಕೆ
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ವಿಪರೀತದ ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ, ಭಾರತೀಯ ಕುಟುಂಬಗಳಿಗೆ ಅಗತ್ಯವಾದ ಇಂಧನವನ್ನು ಅಡೆತಡೆಯೇ ಇಲ್ಲದೆ ಪೂರೈಕೆ ಮಾಡುತ್ತೇವೆ ಎಂದು ಖಾತ್ರಿ ಪಡಿಸುತ್ತೇವೆ. ಇದೀಗ ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಕಂಪನಿ ಹೇಳಿದೆ.

ತಂಡದಿಂದ ಹಾರ್ಡ್‌ವರ್ಕ್‌
ತೈಲದಿಂದ ರಾಸಾಯನಿಕ ವ್ಯವಹಾರಗಳ ತನಕ ವ್ಯವಹಾರಗಳ ಸಮೂಹವಾದ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿರುವಂತೆ, ಹಗಲು-ರಾತ್ರಿ ನಮ್ಮ ತಂಡ ಸಂಸ್ಕರಣಾಗಾರದಿಂದ ಗರಿಷ್ಠ ಪ್ರಮಾಣದ ಉತ್ಪಾದನೆಗಾಗಿ ಶ್ರಮಿಸುತ್ತಿದೆ. ಮತ್ತು ಎಲ್ ಪಿಜಿ ಉತ್ಪಾದನೆ ವಿಸ್ತರಣೆಗೆ ಪ್ರಯತ್ನಿಸುತ್ತಿದೆ. ಈ ಶ್ರಮದ ಹಿಂದಿನ ಉದ್ದೇಶ ಏನೆಂದರೆ, ದೇಶೀಯ ಮಾರುಕಟ್ಟೆಗೆ ಸ್ಥಿರವಾದ ಹಾಗೂ ವಿಶ್ವಾಸಾರ್ಹ ಅನಿಲ ಪೂರೈಕೆ ಮಾಡುವುದಾಗಿದೆ.

ಜನರ ಆದ್ಯತೆಗೆ ಬದ್ಧ
ರಿಲಯನ್ಸ್ ಗೆ ಕೋಟ್ಯಂತರ ಭಾರತೀಯ ಕುಟುಂಬಗಳ ಯೋಗಕ್ಷೇಮ ಹಾಗೂ ಭಾರತೀಯ ಇಂಧನ ಭದ್ರತೆ ಯಾವಾಗಲೂ ಮೊದಲಿಗೆ ಬರುತ್ತದೆ. ನಾವು ಭಾರತ ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತು ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳಿಗೆ ಮತ್ತು ವಿತರಣೆ ಆದ್ಯತೆಗಳಿಗೆ ಸಂಪೂರ್ಣ ಬದ್ಧರಾಗಿದ್ದೇವೆ. ಇಂಧನ ಪೂರೈಕೆ ಯಾವ ವಲಯಕ್ಕೆ ಹಾಗೂ ಸಮುದಾಯಕ್ಕೆ ಬಹಳ ಅಗತ್ಯ ಆಗಿರುತ್ತದೋ ಅವರಿಗೆ ತಲುಪಿಸುವುದನ್ನು ಖಾತ್ರಿ ಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾವು ದೇಶದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಮತ್ತು ಭಾರತದ ಇಂಧನ ಭದ್ರತೆಗೆ ಹಾಗೂ ದೇಶಕ್ಕೆ ಬೇಕಾದ ಅಗತ್ಯ ಇಂಧನ ಪೂರೈಕೆ ವಿಶ್ವಾಸಾರ್ಹತೆ ಉಳಿಯುವುದಕ್ಕೆ ಏನೆಲ್ಲ ಮಾಡುವುದಕ್ಕೆ ಸಾಧ್ಯವೋ ಆ ಎಲ್ಲವನ್ನೂ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದು ಕಂಪನಿ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !