ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ತೊಂದರೆ ಹೋಟೆಲ್ ಉದ್ಯಮಕ್ಕೆ ಸಂಕಷ್ಟ ತಂದಿದೆ. ಅನಿಲ ಕೊರತೆ ಮುಂದುವರಿದರೆ ಕೆಲ ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ. ಹೋಟೆಲ್ ಉದ್ಯಮಕ್ಕೆ ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಬೇಕೆಂದು ಮನವಿ ಮಾಡಲಾಗಿದೆ. ಈ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:
ಹೋಟೆಲ್ ಹಾಗೂ ರೆಸ್ಟೋರೆಂಟ್ ಕ್ಷೇತ್ರವು ದಿನನಿತ್ಯದ ಅಡುಗೆ ಕಾರ್ಯಗಳಿಗೆ ಬಹುತೇಕವಾಗಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆಯೇ ಅವಲಂಬಿತವಾಗಿದೆ. ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ಎಲ್ಲೆಡೆ ಲಭ್ಯವಿಲ್ಲದಿರುವುದರಿಂದ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ, ಉದ್ಯೋಗ ಮತ್ತು ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೇ ವಿಷಯವನ್ನು ಕೇಂದ್ರ ಸಚಿವರ ಗಮನಕ್ಕೆ ತಂದಿರುವ ಶೋಭಾ ಕರಂದ್ಲಾಜೆ, ಹೋಟೆಲ್ ಅಸೋಸಿಯೇಷನ್ ಸಲ್ಲಿಸಿರುವ ಮನವಿಯನ್ನೂ ಅವರಿಗೆ ರವಾನಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯಲು ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.



