ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ಹಬ್ಬಕ್ಕೂ ಮುನ್ನ ಕೇತುಗ್ರಸ್ತ ರಕ್ತ ಚಂದ್ರಗ್ರಹಣ ಸಂಭವಿಸಲಿದೆ. ನಾಳೆ ನಡೆಯುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇಗುಲಗಳಲ್ಲಿ ದೇವರ ದರುಶನದ ಸಮಯದಲ್ಲಿ ಬದಲಾವಣೆ ಆಗಿದೆ.
ಗ್ರಹಣ ಮಧ್ಯಾಹ್ನ 3.10 ಕ್ಕೆ ಆರಂಭವಾಗಿ ಸಂಜೆ 6.47 ಕ್ಕೆ ಮುಕ್ತಾಯವಾಗಲಿದೆ.
ಬನಶಂಕರಿ ದೇವಾಲಯ: ಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ. ಸಂಜೆ 7 ಗಂಟೆಯ ನಂತರವಷ್ಟೇ ನಿತ್ಯ ಪೂಜೆಗಳು ಪುನಾರಂಭಗೊಳ್ಳಲಿವೆ.
ಗವಿ ಗಂಗಾಧರೇಶ್ವರ ದೇವಾಲಯ: ಬೆಳಗ್ಗೆ 9 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುವುದು. ಸಂಜೆ 7.45ರ ನಂತರ ದರ್ಶನಕ್ಕೆ ಅವಕಾಶವಿದ್ದು, ಮಾರ್ಚ್ 4ರಂದು ‘ಗ್ರಹಣ ಶಾಂತಿ ಹೋಮ’ ನಡೆಯಲಿದೆ.
ಕಾಡುಮಲ್ಲೇಶ್ವರ ದೇವಾಲಯ: ಬೆಳಿಗ್ಗೆ 11 ಗಂಟೆಗೆ ಬಾಗಿಲು ಮುಚ್ಚಲಿದ್ದು, ರಾತ್ರಿ 7.30ಕ್ಕೆ ಪುನಃ ತೆರೆಯಲಾಗುವುದು. ಮರುದಿನ ನವಗ್ರಹ ಶಾಂತಿ ಹೋಮ ಆಯೋಜಿಸಲಾಗಿದೆ.
ದೊಡ್ಡ ಗಣಪತಿ ದೇವಾಲಯ: ಗ್ರಹಣ ಮೋಕ್ಷವಾದ ನಂತರ ಅಂದರೆ ರಾತ್ರಿ 7.45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಿದೆ.
ಬಂಡೆ ಮಹಾಕಾಳಿ ದೇವಾಲಯ (ವಿಶೇಷ): ಇಲ್ಲಿ ಗ್ರಹಣದ ಅವಧಿಯಲ್ಲೂ ದೇವಾಲಯ ತೆರೆದಿರುತ್ತದೆ. ಈ ಸಮಯದಲ್ಲಿ ದೇವಿಗೆ ತುಪ್ಪದ ಲೇಪನ ಮಾಡಿ ವಿಶೇಷ ಹೋಮ ನಡೆಸಲಾಗುವುದು. ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶವಿದೆ.
ದಕ್ಷಿಣ ಕನ್ನಡದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಮಾರ್ಚ್ 3ರ ಮಂಗಳವಾರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಿಗ್ಗೆ: 6.30 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ. ಮಧ್ಯಾಹ್ನ: 1.30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತ. ರಾತ್ರಿ: 7.30 ಗಂಟೆಯ ನಂತರ ಎಂದಿನಂತೆ ದರ್ಶನ ಲಭ್ಯವಿರುತ್ತದೆ.
ಚಾಮುಂಡೇಶ್ವರಿ ದೇವಾಲಯ, ಮೈಸೂರು:
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಗ್ರಹಣದ ನಂತರ ಗರ್ಭಗುಡಿ ಶುದ್ಧೀಕರಣ ಕಾರ್ಯಗಳು ನೆರವೇರಲಿವೆ.



