November 18, 2026
Wednesday, November 18, 2026
spot_img

ಮನುಷ್ಯನ ಕೆಲಸಕ್ಕೆ ಯಂತ್ರಗಳ ಸಾಥ್‌: ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಕಣ್ಮನ ಸೆಳೆದ ರೋಬೋಟ್‌ಗಳ ಹೊಸ ಲೋಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗಣಿಗಾರಿಕೆಗೆ ನೆರವಾಗುವ, ದುರ್ಗಮ ಪ್ರದೇಶಗಳಲ್ಲಿ ಸೈನಿಕರ ಬೆಂಗಾವಲಿಗೆ ನಿಲ್ಲುವ, ಮನುಷ್ಯರೊಂದಿಗೆ ಹೆಜ್ಜೆ ಹಾಕುವ, ನೃತ್ಯ ಮಾಡುವ ರೋಬೋಟ್‌ಗಳು… ಹೀಗೆ ತಂತ್ರಜ್ಞಾನದ ಹಲವು ಕೌತುಕಗಳು 29ನೇ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ (BTS) ಗಮನ ಸೆಳೆಯುತ್ತಿವೆ.

ನವೆಂಬರ್ 17ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಿರುವ ಶೃಂಗಸಭೆಯಲ್ಲಿ ವಿವಿಧ ಕ್ಷೇತ್ರಗಳಿಗೆ ನೆರವಾಗಬಲ್ಲ ರೋಬೋಟ್‌ಗಳ ಪ್ರದರ್ಶನ ಆಯೋಜಿಸಲಾಗಿದೆ.

ಗಣಿ ಅನ್ವೇಷಣೆಗೆ ರೋಬೋಟ್‌:

ಗಣಿಗಾರಿಕೆಯಲ್ಲಿ ಮನುಷ್ಯರು ಪ್ರವೇಶಿಸಲು ಕಷ್ಟಕರವಾದ ಹಾಗೂ ಅಪಾಯಕಾರಿ ಸ್ಥಳಗಳಿಗೆ ತೆರಳಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ರೋಬೋಟ್‌ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಸಂಗ್ರಹಿಸಿದ ಮಣ್ಣನ್ನು ಪರೀಕ್ಷಿಸುವ ಮೂಲಕ ಚಿನ್ನ, ಕಬ್ಬಿಣ ಸೇರಿದಂತೆ ವಿವಿಧ ಖನಿಜಗಳ ಇರುವಿಕೆ ಹಾಗೂ ಗುಣಮಟ್ಟದ ಕುರಿತು ಮಾಹಿತಿ ಪಡೆಯಲು ನೆರವಾಗಲಿದೆ. ದುರ್ಗಮ ಪ್ರದೇಶಗಳಲ್ಲಿ ಖನಿಜಗಳ ಅನ್ವೇಷಣೆಗೆ ಈ ತಂತ್ರಜ್ಞಾನ ಸಹಕಾರಿಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಸೈನಿಕರಿಗೆ ನೆರವಾಗುವ ರೋಬೋಟ್‌:

ನಾಲ್ಕು ಕಾಲುಗಳ ವಿನ್ಯಾಸ ಹೊಂದಿರುವ ರೋಬೋಟ್‌ ಸೈನಿಕರಿಗೆ ಅಗತ್ಯ ಸಾಮಗ್ರಿಗಳನ್ನು ಸಾಗಿಸಲು ನೆರವಾಗುವಂತೆ ರೂಪಿಸಲಾಗಿದೆ. ಬೆಟ್ಟ, ಕಲ್ಲುಮಯ ಪ್ರದೇಶ ಹಾಗೂ ಮರುಭೂಮಿಯಂತಹ ಕಠಿಣ ಭೂಪ್ರದೇಶಗಳಲ್ಲಿ ಸಂಚರಿಸಬಲ್ಲ ಜೀಪ್ ಮಾದರಿಯ ರೋಬೋಟ್‌ ಕೂಡ ಗಮನ ಸೆಳೆದಿದೆ. ಸುಮಾರು 20 ಕೆ.ಜಿ. ತೂಕದ ಈ ಯಂತ್ರ ಹೆಚ್ಚುವರಿಯಾಗಿ 15 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಹೊಂದಿದೆ.

ನೃತ್ಯ, ಸಂವಹನದ ಹ್ಯೂಮನಾಯ್ಡ್‌ಗಳು:

ಮನುಷ್ಯರಂತೆ ನಡೆಯುವ ಹಾಗೂ ನೃತ್ಯ ಮಾಡುವ ಹ್ಯೂಮನಾಯ್ಡ್‌ ರೋಬೋಟ್‌ಗಳು ಪ್ರೇಕ್ಷಕರ ಗಮನ ಸೆಳೆದಿವೆ. ಮತ್ತೊಂದು ಪುಟ್ಟ ರೋಬೋಟ್‌ ಸ್ಪೀಕರ್‌ ಹಾಗೂ ಸಿಸಿಟಿವಿ ಕ್ಯಾಮೆರಾ ಹೊಂದಿದ್ದು, ಜನರೊಂದಿಗೆ ಹೆಜ್ಜೆ ಹಾಕುವ ಸಹಾಯಕ ಯಂತ್ರವಾಗಿ ಪ್ರದರ್ಶಿಸಲಾಗಿದೆ.

‘AI and Beyond’ ಥೀಮ್‌ನಡಿ ನಡೆಯುತ್ತಿರುವ ಸಮಿಟ್‌ನಲ್ಲಿ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 10 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು ಹಾಗೂ 1,500ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದಾರೆ. 1,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೂ ತಮ್ಮ ಆವಿಷ್ಕಾರಗಳನ್ನು ಪರಿಚಯಿಸುತ್ತಿವೆ.

Must Read

Skip to toolbar