ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಮೇಡ್ ಇನ್ ಬಿಹಾರ್’ ಈಗ ವಿಶ್ವದಲ್ಲಿ ಸುದ್ದಿಯಾಗಿದೆ. ಇದಕ್ಕೆ ಕಾರಣ ರಷ್ಯಾ ಸೇನೆಗೆ ಬಿಹಾರದ ಹಾಜಿಪುರದಲ್ಲಿ ‘ಮೇಡ್ ಇನ್ ಬಿಹಾರ್’ ಶೂಗಳು ತಯಾರಾಗುತ್ತಿದೆ.
ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಖಾಸಗಿ ಕಂಪನಿಯಾಗಿದ್ದು, ರಷ್ಯಾಕ್ಕೆ ಸೇಫ್ಟಿ ಬೂಟ್ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.
ಈ ಕುರಿತು ಮಾತನಾಡಿದ ಜನರಲ್ ಮ್ಯಾನೇಜರ್ ಶಿಬ್ ಕುಮಾರ್ ರಾಯ್, ‘ನಾವು 2018ರಲ್ಲಿ ಹಾಜಿಪುರದಲ್ಲಿ ಈ ಕಂಪನಿ ಆರಂಭಿಸಿದೆವು. ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸುವುದು ನಮ್ಮ ಮುಖ್ಯ ಗುರಿ. ಹಾಜಿಪುರದಲ್ಲಿ ನಾವು ರಷ್ಯಾಕ್ಕೆ ರಫ್ತು ಮಾಡಬಹುದಾದ ಸೇಫ್ಟಿ ಶೂಗಳನ್ನು ತಯಾರಿಸುತ್ತೇವೆ. ರಷ್ಯಾದ ಜತೆಗೆ ಯುರೋಪ್‌ಗೂ ರಫ್ತು ಮಾಡುತ್ತಿದ್ದೇವೆ. ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.
ರಷ್ಯಾ ಸೈನ್ಯಕ್ಕೆ ಪೂರೈಸುವ ಸೇಫ್ಟಿ ಶೂಗಳು ಹಗುರವಾಗಿರಬೇಕು. ಜಾರದಂತಿರಬೇಕು. ಸೋಲ್‌ನಲ್ಲಿ ವೈಶಿಷ್ಟ್ಯ ಹೊಂದಿರಬೇಕು ಮತ್ತು -40 ಡಿಗ್ರಿ ಸೆಲ್ಸಿಯಸ್‌ನಂತಹ ವಾತಾವರಣಕ್ಕೂ ಹೊಂದಿಕೆಯಾಗುವಂತಿರಬೇಕು. ಈ ರೀತಿಯಲ್ಲಿ ನಾವು ಶೂ ತಯಾರಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಬಿಹಾರದಲ್ಲಿ ವಿಶ್ವ ದರ್ಜೆಯ ಕಾರ್ಖಾನೆಯನ್ನು ಆರಂಭಿಸುವುದು ಮತ್ತು ರಾಜ್ಯದ ಯುವ ಜನತೆಗೆ ಉದ್ಯೋಗ ನೀಡುವುದು ಕಂಪನಿಯ ಎಂ.ಡಿ. ದಾನೇಶ್ ಪ್ರಸಾದ್ ಅವರ ಮಹತ್ವಾಕಾಂಕ್ಷೆ. ಸದ್ಯ ನಮ್ಮಲ್ಲಿರುವ 300 ಉದ್ಯೋಗಿಗಳಲ್ಲಿ ಶೇ. 70ರಷ್ಟು ಮಹಿಳೆಯರು ಎಂದು ಶಿಬ್ ಕುಮಾರ್ ರಾಯ್ ತಿಳಿಸಿದ್ದಾರೆ.
ಕಂಪೆನಿಯುವ ಕಳೆದ ವರ್ಷ 15 ಲಕ್ಷ ಜೋಡಿ ಶೂಗಳನ್ನು ರಫ್ತು ಮಾಡಿದೆ. ಇದರ ಮೌಲ್ಯ ಸುಮಾರು 100 ಕೋಟಿ ರೂ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. ಬಿಹಾರ ಸರ್ಕಾರವು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಜತೆಗೆ ರಸ್ತೆ ಮತ್ತು ಸಂವಹನದಂತಹ ಮೂಲಸೌಕರ್ಯಗಳಲ್ಲಿ ಸುಧಾರಣೆಯ ಅಗತ್ಯವಿದೆ. ಇದರಿಂದ ಗ್ರಾಹಕರಿಗೆ ಸುಲಭವಾಗಿ ನಮ್ಮನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಶಿಬ್ ಕುಮಾರ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಹಾಜಿಪುರ ಘಟಕವು ಸೇಫ್ಟಿ ಶೂಗಳಲ್ಲದೆ ಐಷಾರಾಮಿ ಡಿಸೈನರ್ ಶೂಗಳನ್ನು ಯುರೋಪಿಯನ್ ಮಾರುಕಟ್ಟೆಗಳಾದ ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ಗೆ ರಫ್ತು ಮಾಡುತ್ತಿದೆ. ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗಾಗಿ ಉನ್ನತ ಮಟ್ಟದ ಶೂಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ನಾವು ಇತ್ತೀಚೆಗೆ ಬೆಲ್ಜಿಯಂ ಕಂಪನಿಯೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದೇವೆ ಎಂದು ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಮಜರ್ ಪಲ್ಲುಮಿಯಾ ತಿಳಿಸಿದ್ದಾರೆ.