ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ವಿದ್ಯಾರ್ಥಿಯೊಬ್ಬ ನೇರವಾಗಿ ವಿದ್ಯಾಮಂತ್ರಿಗಳಿಗೆ ಕನ್ನಡ ಭಾಷೆ ಮಾತನಾಡಲು ಬರಲ್ಲ ಎಂದು ಹೇಳಿದ್ದು ತೀವ್ರ ಸುದ್ದಿಯಾಗಿತ್ತು.
ನೀಟ್ ಕೋಚಿಂಗ್ ತರಬೇತಿ ಉದ್ಘಾಟನೆ ನಂತರ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೋರ್ವ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ವಿದ್ಯಾಮಂತ್ರಿಗಳಿಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಹೇಳಿದನು. ಇದನ್ನು ಕೇಳಿಸಿಕೊಂಡ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದು, ಯಾರೋ ಅದು ಹಾಗೆ ಹೇಳಿದ್ದು, ಈ ವಿಷಯಾನ ಗಂಭೀರವಾಗಿ ತಗೊಳ್ಬೇಕು, ಯಾರು ಅಂತ ಫೈಂಡ್ ಔಟ್ ಮಾಡಿ ಕ್ರಮ ತೆಗೆದುಕೊಳ್ಳಿ ಎಂದು ಪಕ್ಕದಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಹೇಳಿದರು. ಈ ವಿಡಿಯೊ ಸಾಕಷ್ಟು ವೈರಲ್ ಆಗಿ ಶಿಕ್ಷಣ ಸಚಿವರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ನಾನು ಟ್ರೋಲ್ ಗಳನ್ನು ನೋಡಿದೆ, ಟ್ರೋಲ್ ಗಳಿಗೆ ಐ ಡೋಂಟ್ ಕೇರ್, ಟ್ರೋಲ್ ಮಾಡೋರಿಗೆ ಉದ್ಯೋಗ ಇಲ್ಲ, ನಾನೊಬ್ಬ ಶಿಕ್ಷಣ ಸಚಿವ, ಅಲ್ಲಿ ವಿದ್ಯಾರ್ಥಿ ತಪ್ಪು ಮಾತನಾಡಲು ಶಾಲೆಯ ಉಪನ್ಯಾಸಕರು, ಪ್ರಾಂಶುಪಾಲರು ಬಿಡಬಾರದು, ನಾನು ಟ್ರೋಲ್ ಮಾಡಿರೋದನ್ನು ನೋಡಿದೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳೋ ಮಧು ಬಂಗಾರಪ್ಪ ನಾನಲ್ಲ ಎಂದರು.
ಪ್ರಾಂಶುಪಾಲರು, ಬಿಇಒ ಮೇಲೆ ಕ್ರಮ ಕೈಗೊಳ್ಳಿ ಎಂದಿದ್ದೆ, ನಾನು ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಿ ಎಂದು ಎಲ್ಲಿ ಹೇಳಿದ್ದೆ, ನಾನು ಹೇಳಿರೋದು ಹೆಡ್ ಮಾಸ್ಟರ್, ಬಿಇಒ ಮೇಲೆ, ಅವರು ಜವಾಬ್ದಾರಿ ತೆಗೆದುಕೊಳ್ಳಬೇಕು, ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಲು ನನಗೇನು ಅಧಿಕಾರ ಇದೆ, ಪ್ರಾಂಶುಪಾಲರು, ಉಪನ್ಯಾಸಕರು ಮಕ್ಕಳನ್ನು ಹತೋಟಿಯಲ್ಲಿಡಬೇಕು, 640 ಶಾಲೆಗಳು ಅಂದು ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. 50 ಸಾವಿರ ಮಕ್ಕಳು ಲೈವ್ ಲ್ಲಿ ನೋಡುತ್ತಿದ್ದರು. ಸರ್ಕಾರದಿಂದ ಮಕ್ಕಳ ಭವಿಷ್ಯಕ್ಕೆ ಮಾಡುತ್ತಿರುವ ಒಂದು ದೊಡ್ಡ ಯೋಜನೆಯದು. ಆ ಯೋಜನೆ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವ ಬದಲು ಯಾರೋ ಒಬ್ಬ ವಿದ್ಯಾರ್ಥಿ ವಿದ್ಯಾ ಮಂತ್ರಿಗೆ ಕನ್ನಡ ಮಾತನಾಡಲು ಬರೋದಿಲ್ಲ ಎಂದು ಹೇಳಿದ್ದನ್ನೇ ಹೈಲೈಟ್ ಮಾಡ್ತೀರ, ನಿಮ್ಮ ಮಕ್ಕಳು ಈ ರೀತಿ ಮಾಡಿದ್ದರೆ ಮನೆಯಲ್ಲಿ ಬುದ್ದಿ ಹೇಳುತ್ತಿರಲಿಲ್ಲವೇ, ನಾನಾದ್ರೆ ನನ್ನ ಮಗ ಆಗಿದ್ದರೆ ಬುದ್ದಿ ಹೇಳುತ್ತಿದ್ದೆ ಎಂದು ಗರಂ ಆದರು.