ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಮನವಮಿಯಂದು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಸಂಭವಿಸಿದ ಹಿಂಸಾಚಾರದ ಹಾನಿಗೆ ಸಂಬಂಧಿಸಿದಂತೆ 12 ವರ್ಷದ ಬಾಲಕನಿಗೆ 2.9 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಜೊತೆಗೆ, ಕೂಲಿ ಕಾರ್ಮಿಕನಾಗಿರುವ ಬಾಲಕನ ತಂದೆ ಕಲು ಖಾನ್ ಗೆ ಸಹ ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ 4.8 ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ರಾಜ್ಯದ ಕ್ಲೈಮ್ಸ್ ಟ್ರಿಬ್ಯೂನಲ್ ಸೂಚಿಸಿದೆ.
ವರದಿಗಳ ಪ್ರಕಾರ, ಈ ಭಾರೀ ಮೊತ್ತದ ದಂಡದ ವಿಚಾರ ತಿಳಿದು ಕುಟುಂಬವು ಆಘಾತಕ್ಕೊಳಗಾಗಿದೆ ಮತ್ತು ಹುಡುಗನು ತಾನು ಬಂಧನಕ್ಕೊಳಗಾಗುವುದಾಗಿ ಹೆದರಿದ್ದಾನೆ ಎನ್ನಲಾಗಿದೆ. ಪ್ರತಿಭಟನೆಗಳು, ಮುಷ್ಕರಗಳು ಅಥವಾ ಯಾವುದೇ ರೀತಿಯ ಹಿಂಸಾಚಾರದ ಸಮಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉದ್ದೇಶಪೂರ್ವಕವಾಗಿ ಆದ ಹಾನಿಗೆ ಪರಿಹಾರವನ್ನು ಮರುಪಡೆಯಲು ಹಾಗೂ ಸಾರ್ವಜನಿಕ ಆಸ್ತಿಗೆ ಆದ ಹಾನಿಯ ಮರು ವಸೂಲಾತಿ ಕಾಯ್ದೆಯ ಅಡಿಯಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆ. ಖಾನ್ ಅವರ ನೆರೆಹೊರೆಯವರು ನೀಡಿದ ದೂರಿನನ್ವಯ ನೋಟಿಸ್ ನೀಡಲಾಗಿದೆ. ಏಪ್ರಿಲ್ 10 ರಂದು ನಗರದಲ್ಲಿ ನಡೆದ ರಾಮನವಮಿ ಮೆರವಣಿಗೆ ವೇಳೆ ಗುಂಪೊಂದು ಹಲ್ಲೆ ನಡೆಸಿದ್ದರಿಂದ ತನ್ನ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು 12 ವರ್ಷದ ಬಾಲಕನ ವಿರುದ್ಧ ದೂರು ದಾಖಲಿಸಿರುವ ಮಹಿಳೆ ಆರೋಪಿಸಿದ್ದಾರೆ.
“ನನ್ನ ಮಗ ಅಪ್ರಾಪ್ತ. ಗಲಭೆ ನಡೆದಾಗ ನಾವು ಮಲಗಿದ್ದೆವು, ನಮಗೆ ನ್ಯಾಯ ಬೇಕು” ಎಂದು ಕಲು ಖಾನ್ ಆಗ್ರಹಿಸಿದ್ದಾರೆ. ಏತನ್ಮಧ್ಯೆ, ಕಲು ಖಾನ್ ಅವರ ಪತ್ನಿ ತಮ್ಮ ಮಗ “ಪೊಲೀಸರು ಅವನನ್ನು ಬಂಧಿಸುತ್ತಾರೆ ಎಂಬ ಭಯದಲ್ಲಿ ಹೆದರಿಹೋಗಿದ್ದಾನೆ” ಎಂದು ಹೇಳಿದರು.
ಆಡಳಿತದ ಕ್ರಮಕ್ಕೆ ಪ್ರತಿಕ್ರಿಯಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದ್ದುದಿನ್ ಓವೈಸಿ, ಅವರು ಮುಸ್ಲಿಮರ ಮೇಲೆ ತುಂಬಾ ದ್ವೇಷವನ್ನು ಹೊಂದಿದ್ದಾರೆ, ಈಗ ಮಕ್ಕಳನ್ನು ಸಹ ಅವರು ಬಿಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಏಪ್ರಿಲ್ 10 ರಂದು ಖಾರ್ಗೋನ್ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ನಂತರ ಎರಡು ಗುಂಪುಗಳ ನಡುವೆ ಭಾರೀ ಘರ್ಷಣೆಗಳು ಸಂಭವಿಸಿದವು. ಈ ಘರ್ಷಣೆಗಳು ಹಿಂಸಾಚಾರಕ್ಕೆ ಕಾರಣವಾಯಿತು, ಬೆಂಕಿ ಮತ್ತು ಕಲ್ಲು ತೂರಾಟದ ಘಟನೆಗಳು ನಡೆದವು. ಕೂಡಲೇ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು.
ಕೋಮು ಘರ್ಷಣೆಯ ನಂತರ, 60 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 170 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಆಡಳಿತವು 50 ಕ್ಕೂ ಹೆಚ್ಚು ಮನೆಗಳು, ಅಂಗಡಿಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ