ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸರು ಬಂಧಿಸುತ್ತಾರೆಂಬ ಭಯದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ನದಿಗೆ ಹಾರಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರಾಜ್ಯದ ಶಿಯೋಪುರ್ ಪಟ್ಟಣದಲ್ಲಿ ಖಾನ್ ಎಂಬ ವ್ಯಕ್ತಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಆಧರಿಸಿ, ಬಂಧನ ವಾರೆಂಟ್ ಹಿಡಿದು ಆರೋಪಿ ಮನೆಗೆ ಬಂದರು.
ಪೊಲೀಸರನ್ನು ಕಂಡ ಖಾನ್, ಬಂಧನಕ್ಕೆ ಹೆದರಿ ಹಿಂಬದಿ ಬಾಗಿಲಿನ ಮೂಲಕ ಮನೆಯಿಂದ ಪರಾರಿಯಾಗಿ ನದಿಗೆ ಹಾರಿದ್ದಾನೆ. ಭಾನುವಾರ ಈ ಘಟನೆ ನಡೆದಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನದಿಯ ದಡದಲ್ಲಿದ್ದ ಪೊಲೀಸರು ಆರೋಪಿ ಖಾನ್‌ಗೆ ದಡಕ್ಕೆ ಬರುವಂತೆ ಹೇಳುತ್ತಿದ್ದು, ಆರೋಪಿ ನಿರಾಕರಿಸುತ್ತಿರುವ ದೃಶ್ಯ-ಮಾತುಗಳು ವಿಡಿಯೋದಲ್ಲಿದೆ.
ಖಾನ್ ವಿರುದ್ಧ ಪೊಲೀಸರು ಸೆಕ್ಷನ್ 110 ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಖಾನ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ.