ಹೊಸದಿಗಂತ ವರದಿ, ಮಡಿಕೇರಿ:
ಹೊದ್ದೂರು ಪಾಲೆಮಾಡು ಸ್ಮಶಾನ ಜಾಗದ ಸಮಸ್ಯೆ ಸಂಬಂಧ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಪ್ರಕರನವನ್ನು ಇತ್ಯರ್ಥಗೊಳಿಸಬೇಕೆಂದು ಹರಿಸಬೇಕೆಂದು ಬಹುಜನ ಜಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ಜಯಪ್ಪ ಹಾನಗಲ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲೇಮಾಡಿನಲ್ಲಿ ಸ್ಮಶಾನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಾರದೆಂದು ಆಗ್ರಹಿಸಿದರು.
ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಕ್ರಮ ಖಂಡನೀಯ. ಈ ಜಮೀನನ್ನು ತೆರವುಗೊಳಿಸಿ ಭೂರಹಿತರಿಗೆ ಹಂಚಬೇಕು ಮತ್ತು 5 ಎಕರೆ ಮೇಲ್ಪಟ್ಟು ಒತ್ತುವರಿಯಾಗಿರುವ ಜಾಗವನ್ನು ಸಕ್ರಮಗೊಳಿಸಬಾರದೆಂದರು.
ಜಿಲ್ಲೆಯ ಎಲ್ಲಾ ಆದಿವಾಸಿಗಳಿಗೆ ಕಾಡಿನಂಚಿನಲ್ಲೇ ವಾಸಿಸಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಕಾಡಿನಿಂದ ಹೊರಹಾಕಬಾರದು ಎಂದು ಒತ್ತಾಯಿಸಿದರು.
ಸ್ವಾಮೀಜಿ ಹೋರಾಟಕ್ಕೆ ಬೆಂಬಲ:
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ 90 ದಿನಗಳಿಂದ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮೀಜಿ ಅವರು ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಬಹುಜನ ಸಮಾಜ ಪಕ್ಷದ ಸಂಪೂರ್ಣ ಬೆಂಬಲವಿದೆ. ಸರ್ಕಾರ ವಾಲ್ಮೀಕಿ ಸಮಾಜದ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಜಯಪ್ಪ ಹಾನಗಲ್ ಹೇಳಿದರು.
ಜಿಲ್ಲಾಧ್ಯಕ್ಷ ಸಿದ್ದಪ್ಪ ಮಾತನಾಡಿ, ಪಕ್ಷದ ವತಿಯಿಂದ ಮೇ 31 ರವರೆಗೆ ಹಮ್ಮಿಕೊಂಡಿರುವ ‘ಸಂವಿಧಾನ ರಕ್ಷಿಸೋಣ ದೇಶವನ್ನು ಉಳಿಸೋಣ’ ಎಂಬ ಜಾಗೃತಿ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ಜನ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಯೋಜಕ ಮಹಮ್ಮದ್ ಕುಂಞಿ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಚೆನ್ನಬಸವಯ್ಯ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ