ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾ ಜನೋತ್ಸವಕ್ಕೆ ಸಿಕ್ಕಿತು ಚಾಲನೆ

ಹೊಸದಿಗಂತ ವರದಿ, ಮಡಿಕೇರಿ:

ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಗರದ ನಾಲ್ಕು ಶಕ್ತಿ ದೇವತೆಗಳ ‘ಕರಗ ಉತ್ಸವ’ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ಭಾನುವಾರ ಸಂಜೆ ಇಲ್ಲಿನ ಪಂಪಿನ ಕೆರೆಯ ಬಳಿ ಆರಂಭಗೊಳ್ಳುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರಕಿತು.

ಮಡಿಕೇರಿ ನಗರ ದಸರಾ ಸಮಿತಿ, ದಸರಾ ಉಪ ಸಮಿತಿಗಳು, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಡಿತು.

ನವರಾತ್ರಿ ಉತ್ಸವದ ಆರಂಭದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ನಾಲ್ಕು ಶಕ್ತಿದೇವತೆಗಳ ದೇವಸ್ಥಾನಗಳಿಂದ ವ್ರತಧಾರಿಗಳೊಂದಿಗೆ ದೇವಾಲಯ ಸಮಿತಿಯವರು ಮಂಗಳವಾದ್ಯ ಸಹಿತ ಕರಗ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಹೊತ್ತು ಮೆರವಣಿಗೆಯ ಮೂಲಕ ಪಂಪಿನಕೆರೆಗೆ ತೆರಳಿದರು. ಬಳಿಕ ಅಗತ್ಯ ಪೂಜಾ ವಿಧಿ-ವಿಧಾನಗಳೊಂದಿಗೆ ಅತ್ಯಾಕರ್ಷಕವಾಗಿ ಕರಗಗಳನ್ನು ಕಟ್ಟಿ ಹೂವುಗಳಿಂದ ಅಲಂಕರಿಸಿ ಸಂಜೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

ಪಂಪಿನ ಕೆರೆ ಆವರಣದಿಂದ ಸಂಜೆ 7ಗಂಟೆ ಸುಮಾರಿಗೆ ಹೊರ ಬಂದ ನಾಲ್ಕು ಕರಗಗಳ ಮೆರವಣಿಗೆಗೆ ಶಾಸಕದ್ವಯರು, ಜಿಲ್ಲಾಧಿಕಾರಿಗಳು ಹಾಗೂ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಈಡುಗಾಯಿ ಒಡೆಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಶಾಸಕರಾದ ಡಾ. ಮಂಥರ್ ಗೌಡ, ಎ.ಎಸ್.ಪೊನ್ನಣ್ಣ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾಧ್ಯಕ್ಷೆ ಹಾಗೂ ದಸರಾ‌ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಕೆಪಿಸಿಸಿ ಮುಖಂಡ ಚಂದ್ತಮೌಳಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪೌರಾಯುಕ್ತ ವಿಜಯ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಕರಗಗಳಿಗೆ ಪ್ರಥಮ ಪೂಜೆ ಸಲ್ಲಿಸಿದರು.

ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡ ನಗರದ ರಾಜಾಸೀಟು ಬಳಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ವ್ರತಧಾರಿ ಪಿ.ಪಿ.ಚಾಮಿ 50 ವರ್ಷಗಳಿಂದ ಹೊರುತ್ತಿದ್ದು, ಈ ಬಾರಿ ಅವರಿಗೆ ಹರೀಶ್ ಅವರು‌ ಸಾಥ್ ನೀಡಲಿದ್ದಾರೆ. ದಂಡಿನ ಮಾರಿಯಮ್ಮ ಕರಗವನ್ನು ಮಾಜಿ ಸೈನಿಕ ಜಿ.ಎ.ಉಮೇಶ್ ಅವರು ಸತತ 51ನೇ ವರ್ಷದಿಂದ ಹೊರುತ್ತಿದ್ದರೆ, ಕೋಟೆ ಮಾರಿಯಮ್ಮ ಕರಗವನ್ನು ಸತತ 31 ವರ್ಷಗಳಿಂದ ಪಿ.ಬಿ.ಅನೀಶ್‌ಕುಮಾರ್, ಪಿ.ಬಿ.ಉಮೇಶ್‌ ಸುಬ್ರಮಣಿ ಹೊರುತ್ತಿದ್ದಾರೆ. ಕಂಚಿ ಕಾಮಾಕ್ಷಿಯಮ್ಮ ದೇಗುಲದ ಕರಗವನ್ನು ನವೀನ್‌ಕುಮಾರ್ ಅವರು ಕಳೆದ 15 ವರ್ಷಗಳಿಂದ ಹೊರುತ್ತಿದ್ದರು. ಈಗ ಅವರ ಸೋದರ ಕಾರ್ತಿಕ್ ಇದೇ ಮೊದಲ ಬಾರಿ ಕರಗವನ್ನು ಹೊರುವ ಮೂಲಕ ನಗರ ಮೆರವಣಿಗೆಯನ್ನು ಆರಂಭಿಸಿದರು.

ಇದೇ ಸಂದರ್ಭ ಕರಗಗಳನ್ನು ಹೊರುವ ವ್ರತಧಾರಿಗಳನ್ನು ಸನ್ಮಾನಿಸಲಾಯಿತು.

ನಗರ ಪ್ರದಕ್ಷಿಣೆ: ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಮಹದೇವಪೇಟೆಯ ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಸಂಪ್ರದಾಯದಂತೆ ಪೇಟೆ ಶ್ರೀ ರಾಮಮಂದಿರ ತಲುಪಿ, ಅಲ್ಲಿಯೂ ಕರಗಗಳಿಗೆ ಪೂಜೆ ಸಲ್ಲಿಸಿದ ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ಸೋಮವಾರದಿಂದ ಕರಗಗಳು ನಗರ ಪ್ರದಕ್ಷಿಣೆ ಆರಂಭಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!