CINE | ‘ಮಹಾವತಾರ ನರಸಿಂಹ’ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ: ಶೀಘ್ರದಲ್ಲೇ 70 ಕೋಟಿ ಕ್ಲಬ್ ಸೇರುವ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಶ್ವಿನ್ ಕುಮಾರ್ ನಿರ್ದೇಶನದ ಪೌರಾಣಿಕ ಅನಿಮೇಟೆಡ್ ಚಿತ್ರ ‘ಮಹಾವತಾರ ನರಸಿಂಹ’ ದೇಶದಾದ್ಯಂತ ಸಿನೆಮಾಪ್ರಿಯರ ಅಭಿಮಾನಕ್ಕೆ ಪಾತ್ರವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸಂಪೂರ್ಣ 3D ಅನಿಮೇಷನ್ ತಂತ್ರಜ್ಞಾನದಲ್ಲಿ ತಯಾರಾಗಿರುವ ಈ ಚಿತ್ರವು ಭಕ್ತಿ, ಆಧ್ಯಾತ್ಮಿಕತೆ ಮತ್ತು ಆಕ್ಷನ್‌ನ ಸಮನ್ವಯದಿಂದ ಪ್ರೇಕ್ಷಕರ ಮನ ಸೆಳೆದಿದೆ.

ವರದಿಗಳ ಪ್ರಕಾರ ಚಿತ್ರದ ಒಂಬತ್ತನೇ ದಿನಕ್ಕೆ (ಆ.2, ಶನಿವಾರ) 15 ಕೋಟಿ ರೂ. ಗಳಿಸಿದ್ದು, ಒಟ್ಟು 67.95 ಕೋಟಿ ರೂಪಾಯಿಗೆ ತಲುಪಿದೆ. ಆರಂಭದ ಏಳು ದಿನಗಳಲ್ಲಿ ಈ ಚಿತ್ರವು 44.75 ಕೋಟಿ ರೂ. ಗಳಿಸಿತ್ತು. ಎರಡನೇ ವಾರದ ಶುಕ್ರವಾರ ಇದಕ್ಕೆ 7.7 ಕೋಟಿ ರೂ. ಲಾಭವಾಗಿದ್ದು, ಶೀಘ್ರದಲ್ಲೇ 70 ಕೋಟಿ ಕ್ಲಬ್ ಸೇರುವ ನಿರೀಕ್ಷೆ ವ್ಯಕ್ತವಾಗಿದೆ.

ತೆಲುಗು ಪ್ರಾಂತ್ಯದಲ್ಲಿ ಶನಿವಾರದಂದು ಈ ಚಿತ್ರವು ಶೇ.74.08 ರಷ್ಟು ಪ್ರೇಕ್ಷಕರನ್ನು ಸೆಳೆದಿದೆ. ಬೆಳಿಗ್ಗೆ ಶೇ.46.36ರಷ್ಟು ಹಾಜರಾತಿ ಆರಂಭವಾಗಿ ಮಧ್ಯಾಹ್ನಕ್ಕೆ ಶೇ.74.60, ಸಂಜೆ ಶೇ.81.77 ಮತ್ತು ರಾತ್ರಿ ವೇಳೆ ಶೇ.93.57ರಷ್ಟು ಪ್ರೇಕ್ಷಕರನ್ನು ಆಕರ್ಷಿಸಿದೆ.

ಚಿತ್ರದಲ್ಲಿ ಪಾತ್ರಕ್ಕೆ ಧ್ವನಿ ನೀಡಿದ ಕಲಾವಿದರ ಹೆಸರುಗಳು ಬಹಿರಂಗವಾಗದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಧ್ವನಿಗಳ ನಟನೆ, ಚಿತ್ರದ ಕತೆ ಹಾಗೂ ಆನಿಮೇಷನ್ ಗುಣಮಟ್ಟವನ್ನು ಪ್ರೇಕ್ಷಕರು ಪ್ರಶಂಸೆ ಮಾಡುತ್ತಿದ್ದಾರೆ.

ಇದನ್ನು ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಯಾವ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎಂಬ ವಿಷಯ ಇನ್ನೂ ಖಚಿತವಾಗಿಲ್ಲ. ಆದರೆ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಅಥವಾ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!