ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹದೇಶ್ವರ ಬೆಟ್ಟದ ಹತ್ತಿದ ಸಾಲೂರು ಬೃಹನ್ಮಠದ ಹಿರಿಯ ಪೀಠಾಧಿಪತಿ ಪೂಜ್ಯ ಶ್ರೀ ಗುರುಸ್ವಾಮೀಜಿ ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.
ಸಾಲೂರು ಮಠದ 17ನೇ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಗಳು, ಗುಡ್ಡಗಾಡು ಪ್ರದೇಶದ ಜನಾಂಗಗಳ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮೀಸಲಿಟ್ಟಿದ್ದವರು. ಕಾಡಂಚಿನ ಬಾಲಕರನ್ನು ಮಠಕ್ಕೆ ಕರೆತಂದು ವಸತಿ, ಊಟ ಮತ್ತು ಶಿಕ್ಷಣದ ವ್ಯವಸ್ಥೆ ಮಾಡಿದರು. ಬಡ ಮಕ್ಕಳ ಭವಿಷ್ಯದ ಕುರಿತ ಚಿಂತನೆಯೇ ಅವರಿಗೆ ಧ್ಯೇಯವಾಕ್ಯವಾಗಿತ್ತು. ಪೊನ್ನಾಚಿ ಎಂಬ ಕುಗ್ರಾಮದಲ್ಲಿ ಅವರು ಪ್ರೌಢಶಾಲೆಯನ್ನು ಸ್ಥಾಪಿಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೊಸ ಬೆಳಕನ್ನು ತಂದರು. ಈ ಶಾಲೆ ಸಾವಿರಾರು ಮಕ್ಕಳು ಜ್ಞಾನ ದೀಪದಿಂದ ಬೆಳಗಲು ಕಾರಣವಾಯಿತು. ಮಠದ ಆವರಣದಲ್ಲೇ ಬಡ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಿ, ಉಚಿತ ಶಿಕ್ಷಣ, ವಸತಿ, ಆಹಾರ ಹಾಗೂ ಮೌಲ್ಯಾಧಾರಿತ ಜೀವನಕ್ಕೆ ಪಾಠ ಕಲಿಸಿದರು.
ಪೂಜ್ಯ ಶ್ರೀಗಳು ಕೇವಲ ಧಾರ್ಮಿಕ ಗುರುಗಳಾಗಿ ಮಾತ್ರವಲ್ಲ, ಸಮಾಜಪರ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು. ಸುತ್ತಮುತ್ತಲ ಗ್ರಾಮಗಳಲ್ಲಿ ಬಿಕ್ಷೆ ಬೇಡಿ ಆ ಹಣವನ್ನು ಮಕ್ಕಳ ಪಾಠಶಾಲೆಗಳ ಅಭಿವೃದ್ಧಿಗೆ ಬಳಸುತ್ತಿದ್ದರು. ಅವರ ನಿರಂಜನ ಸೇವಾ ಮನೋಭಾವ, ತ್ಯಾಗಮಯ ಜೀವನ ಶ್ರಮ ಎಲ್ಲರಿಗೂ ಮಾದರಿಯಾಗಿದೆ.