ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ವೇಳೆ ತ್ರಿವೇಣಿ ಸಂಗಮದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಪವಿತ್ರ ಸ್ನಾನ ಮಾಡಿದ್ದಾರೆ.
ಮಧ್ಯಾಹ್ನ ಮಹಾಕುಂಭ ನಗರಕ್ಕೆ ಆಗಮಿಸಿದ ಯಾದವ್ ಪವಿತ್ರ ಸ್ನಾನ ಮಾಡಿದ್ದಾರೆ.
ಸ್ನಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಸಂಪ್ರದಾಯದಂತೆ ಸಂಗಮದಲ್ಲಿ 11 ಬಾರಿ ಸ್ನಾನ ಮಾಡುವ ಅವಕಾಶ ಸಿಕ್ಕಿದೆ. 144 ವರ್ಷಗಳ ನಂತರ ಈ ಮಹಾಕುಂಭ ಮೇಳ ನಡೆಯುತ್ತಿದೆ. ಸಾಮರಸ್ಯ, ಸದ್ಭಾವನೆ ಸಹಿಷ್ಣುತೆಯೊಂದಿಗೆ ಎಲ್ಲರೂ ಮುಂದುವರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದು, ಜನರ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.
ಈ ತಿಂಗಳ ಆರಂಭದಲ್ಲಿ ಪ್ರಯಾಗ್‌ರಾಜ್‌ನಲ್ಲಿರುವ ಮಹಾಕುಂಭಕ್ಕೆ ಭೇಟಿ ನೀಡುತ್ತೀರಾ ಎಂಬ ಪ್ರಶ್ನೆಗೆ ಯಾವಾಗಲೂ ಕುಂಭ ಮೇಳಕ್ಕೆ ಹೋಗುತ್ತೇನೆ. ಕೆಲವರು ಪುಣ್ಯ ಪಡೆಯಲು ಗಂಗಾ ಸ್ನಾನಕ್ಕೆ ಹೋಗುತ್ತಾರೆ, ಕೆಲವರು ದಾನ ನೀಡಲು ಹೋಗುತ್ತಾರೆ. ಮತ್ತೆ ಕೆಲವರು ತಮ್ಮ ಪಾಪವನ್ನು ತೊಳೆಯಲು ಹೋಗುತ್ತಾರೆ. ನಾವು ಪುಣ್ಯ ಮತ್ತು ದಾನಕ್ಕಾಗಿ ಹೋಗುತ್ತೇವೆ ಎಂದು ಅವರು ಹೇಳಿದ್ದರು.