ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ದೊಡ್ಡ ಘಟನೆಯೇನಲ್ಲ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಮಂಗಳವಾರ ಹೇಳಿದ್ದಾರೆ.
ಜನವರಿ 29, ಮೌನಿ ಅಮವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರಯಾಗ್‌ರಾಜ್‌ನ ಸಂಗಮ್ ಪ್ರದೇಶದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನ ಪ್ರಾಣ ಕಳೆದುಕೊಂಡಿದ್ದು, 60 ಮಂದಿ ಗಾಯಗೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು,ನಾವು ಕುಂಭಕ್ಕೆ ಹೋಗಿದ್ದೆವು… ನಾವು ಚೆನ್ನಾಗಿ ಸ್ನಾನ ಮಾಡಿದೆವು… ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿತ್ತು. ಇದರ ಹೊರತಾಗಿಯೂ ಘಟನೆ(ಕಾಲ್ತುಳಿತ) ನಡೆದಿದ. ಅದು ದೊಡ್ಡ ಘಟನೆಯೇನಲ್ಲ. ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ… ಕುಂಭ ಮೇಳವನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ. ತುಂಬಾ ಜನರು ಬರುತ್ತಿದ್ದಾರೆ, ಅದನ್ನು ನಿರ್ವಹಿಸುವುದು ತುಂಬಾ ಕಷ್ಟ. ಆದರೆ ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ..” ಎಂದು ಹೇಮಾ ಮಾಲಿನಿ ಸಂಸತ್ ಭವನದ ಸಂಕೀರ್ಣದಲ್ಲಿ ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಸರ್ಕಾರ ಮರೆಮಾಚುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿರುವ ಬಗ್ಗೆ ಕೇಳಿದಾಗ, ಅವರು ಏನು ಬೇಕಾದರೂ ಹೇಳುತ್ತಾರೆ… ತಪ್ಪು ತಪ್ಪಾಗಿ ಹೇಳುವುದೇ ಅವರ ಕೆಲಸ ಎಂದರು.