ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲೆಂಟೆಡ್ ಕನ್ನಡಿಗ ದೇವದತ್ ಪಡಿಕ್ಕಲ್ ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ ಅವರು ಗಾಯದಿಂದ ಕೆಲ ಸಮಯ ಕ್ರಿಕೆಟ್‌ನಿಂದ ದೂರವಾಗಿದ್ದರು. ಇದೀಗ ಅವರು ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದು, ಮಹಾರಾಜ ಟ್ರೋಫಿಯು ಅವರ Comebackಗೆ ವೇದಿಕೆಯಾಗಲಿದೆ.
ಜುಲೈ 15 ರಂದು ನಡೆದ ಹರಾಜಿನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ದೇವದತ್ ಪಡಿಕ್ಕಲ್‌ರನ್ನು 13.20 ಲಕ್ಷ ರೂಪಾಯಿಗೆ ಖರೀದಿಸಿತು. ಇದುವರೆಗೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ಸ್ಥಾನವನ್ನು ಅವರು ಪಡೆದಿದ್ದಾರೆ. ಇದು ಮಹಾರಾಜ ಟ್ರೋಫಿ ಇತಿಹಾಸದಲ್ಲೇ ದಾಖಲೆ ಸಾಧನೆಯಾಗಿದೆ.
ಪದ್ಮಶ್ರೀ ಪ್ರಶಸ್ತಿ ವಿಜೇತ ಆಟಗಾರ ಮನೀಶ್ ಪಾಂಡೆಯನ್ನು ಮೈಸೂರು ವಾರಿಯರ್ಸ್ 12.20 ಲಕ್ಷಕ್ಕೆ ಪಡೆದುಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಅಭಿನವ್ ಮನೋಹರ್‌ನನ್ನು ಕೂಡ ಹುಬ್ಬಳ್ಳಿ ಟೈಗರ್ಸ್ ತಂಡವೇ 12.20 ಲಕ್ಷಕ್ಕೆ ಖರೀದಿಸಿತು. ಮಂಗಳೂರು ಡ್ರ್ಯಾಗನ್ಸ್ ತಂಡ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್‌ನ್ನು 8.60 ಲಕ್ಷಕ್ಕೆ ಪಡೆಯಿತು.
ಹರಾಜಿನಲ್ಲಿ ಕೇವಲ ಮೊತ್ತವಲ್ಲ, ಸ್ಥಳೀಯ ಆಟಗಾರರಿಗೂ ಪ್ರಾಶಸ್ತ್ಯ ಕೊಟ್ಟಿದ್ದು ಗಮನಾರ್ಹ. ಪ್ರತಿ ತಂಡದಲ್ಲಿಯೂ ಕನಿಷ್ಠ ಇಬ್ಬರು ಸ್ಥಳೀಯ ಆಟಗಾರರನ್ನು ಇಟ್ಟುಕೊಳ್ಳಬೇಕೆಂಬ ನಿಯಮವಿದೆ. ಹುಬ್ಬಳ್ಳಿ ಮೂಲದ ಆಟಗಾರರಿಗೆ ಇದರ ಮೂಲಕ ಅವಕಾಶ ಸಿಕ್ಕಿದೆ. ಯುವ ಪ್ರತಿಭೆಗಳಿಗೆ ಇದು ದೊಡ್ಡ ವೇದಿಕೆಯಾಗಿ ಪರಿಣಮಿಸಿದೆ.
ಆದರೆ ಅಭಿಮಾನಿಗಳಿಗೆ ನಿರಾಶೆಯ ಸಂಗತಿಯೊಂದಿದೆ, ಈ ಬಾರಿಯ ಟೂರ್ನಿಯ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೈದಾನಕ್ಕೆ ಪ್ರೇಕ್ಷಕರ ಪ್ರವೇಶವಿಲ್ಲ. ಆದರೆ ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತದೆ.
ದೇವದತ್ ಪಡಿಕ್ಕಲ್ ಇದೀಗ ಮತ್ತೆ ಕ್ರಿಕೆಟ್ ಆಲೋಕದಲ್ಲಿ ಬೆಳಗಲು ಸಜ್ಜಾಗಿದ್ದು, ತಮ್ಮ ಬೆಲೆಗೆ ತಕ್ಕ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ.