ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನ್ಮದಿನ ಎಂದರೆ ಹೂವಿನ ಬೊಕೆ, ಟೆಡ್ಡಿ ಬೇರ್, ಚಾಕೊಲೇಟ್, ಚಿನ್ನ ಹೀಗೆ ವಿವಿಧ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಈಗ ಟ್ರೆಂಡ್ ಬದಲಾಗಿದೆ ಗುರೂ..ಮಾರುಕಟ್ಟೆಯಲ್ಲಿ ಯಾವ ತರಕಾರಿಗೆ ಅತೀ ಹೆಚ್ಚು ಬೆಲೆ ಇರುತ್ತೋ ಅದನ್ನೇ ಉಡುಗೊರೆಯಾಗಿ ನೀಡುವ ಕಾಲ ಬಂದಿದೆ. ಕಳೆದ ಬಾರಿ ಈರುಳ್ಳಿ ಉಡುಗೊರೆಯಾಗಿ ನೀಡಿದ್ದ ಹಲವು ಘಟನೆಗಳು ನಡೆದಿವೆ. ಈಗ ಈ ಸಾಲಿಗೆ ಟೊಮ್ಯಾಟೋ ಸೇರಿದೆ.
ಮಹಾರಾಷ್ಟ್ರದಲ್ಲಿ ಒಂದು ಕಿಲೋ ಟೊಮ್ಯಾಟೋ ರೂ.140ಕ್ಕೆ ಮಾರಾಟವಾಗುತ್ತಿದೆ. ಕಲ್ಯಾಣ್ ಪಟ್ಟಣದ ಕೊಚಾಡಿ ಪ್ರದೇಶದಲ್ಲಿ ವಾಸಿಸುವ ಸೋನಾಲ್ ಬೋರ್ಸೆ ಎಂಬ ಮಹಿಳೆ ಭಾನುವಾರ (ಜುಲೈ 9, 2023) ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಆಕೆಯ ಸಂಬಂಧಿಕರು ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದರು. ಸಂಬಂಧಿಕರೆಲ್ಲರೂ 4 ಕೆಜಿಗೂ ಹೆಚ್ಚು ಟೊಮ್ಯಾಟೋಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ಕಂಡು ಮಹಿಳೆ ದಂಗಾಗಿದ್ದಾರೆ.
ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದ ಸಂಬಂಧಿಕರು, ‘ಆಕಾಶದಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಆಶೀರ್ವದಿಸಿದರು. ಹುಟ್ಟುಹಬ್ಬದ ಉಡುಗೊರೆಯಾಗಿ ಸಿಕ್ಕಿದ ಟೊಮ್ಯಾಟೋವನ್ನು ಸುತ್ತ ಅಲಂಕರಿಸಿ ಕೇಕ್ ಅನ್ನು ಕತ್ತರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.