ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹಳ ಆತುರವಿಲ್ಲದೆ, ಯಾವುದೇ ಭರ್ಜರಿ ಪ್ರಚಾರವಿಲ್ಲದೆ ಬಿಡುಗಡೆಯಾದ ಮಹಾವತಾರ ನರಸಿಂಹ ಸಿನಿಮಾ ಇದೀಗ ದಾಖಲೆಗಳನ್ನು ಮುರಿಯುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಚಿತ್ರವು ಅದ್ಭುತ ದೃಶ್ಯ ವೈಭವ, ಉನ್ನತ ಮಟ್ಟದ ಅನಿಮೇಷನ್ ಗುಣಮಟ್ಟ ಮತ್ತು ಮನಮೋಹಕ ಸಂಗೀತದಿಂದ ಪ್ರೇಕ್ಷಕರ ಮನ ಗೆದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಗಳು ಹಾಗೂ ಪೌರಾಣಿಕ ಕಥೆಯ ಆಕರ್ಷಣೆ, ಚಿತ್ರಕ್ಕೆ ಹೆಚ್ಚುವರಿ ಬಲ ನೀಡಿದೆ.
ಕೆವಲ ಹತ್ತು ದಿನಗಳಲ್ಲೇ ಈ ಚಿತ್ರವು 100 ಕೋಟಿ ಕ್ಲಬ್‌ಗೆ ಪ್ರವೇಶಿಸಿ, ಇಂದಿನ ದಿನದ ವರೆಗೆ 170 ಕೋಟಿಗೂ ಹೆಚ್ಚು ಗ್ರಾಸ್ ಗಳಿಕೆ ದಾಖಲಿಸಿದೆ. ವಿಶೇಷವೆಂದರೆ, ಬಿಡುಗಡೆಯಾದ 16ನೇ ದಿನದಂದು ಮಾತ್ರವೇ ಸುಮಾರು 25 ಕೋಟಿಗಳ ಸಂಗ್ರಹ ಮಾಡಿದೆ. ಪ್ರೇಕ್ಷಕರ ಬಾಯಿ ಮಾತಿನಿಂದಲೇ ಈ ಚಿತ್ರವು ಅತ್ಯುತ್ತಮ ಮೆಚ್ಚುಗೆ ಪಡೆದು, ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಅನಿಮೇಟೆಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಯಶಸ್ಸಿನೊಂದಿಗೆ, ಮಹಾವತಾರ ಸಿನಿಮ್ಯಾಟಿಕ್ ಯೂನಿವರ್ಸ್ ಮೇಲಿನ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿವೆ. ಹೊಂಬಾಳೆ ಫಿಲ್ಮ್ಸ್‌ನಡಿ ನಿರ್ಮಾಣವಾಗುತ್ತಿರುವ ಈ ಮೆಗಾ ಯೋಜನೆ ಒಟ್ಟು ಏಳು ಚಲನಚಿತ್ರಗಳನ್ನು ಒಳಗೊಂಡಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಚಿತ್ರ ಬಿಡುಗಡೆಯಾಗುವ ಯೋಜನೆ ಇದೆ. ನಿರ್ದೇಶಕ ಅಶ್ವಿನ್ ಕುಮಾರ್ ಅವರ ಪ್ರಕಾರ, ಈ ಸರಣಿಯ ಮುಂದಿನ ಭಾಗವಾದ ಮಹಾವತಾರ: ಪರಶುರಾಮ್ ಇನ್ನಷ್ಟು ಭಾವನಾತ್ಮಕ, ಶಕ್ತಿಶಾಲಿ ಮತ್ತು ದೃಶ್ಯ ವೈಭವದಿಂದ ಕೂಡಿರುವುದು ಖಚಿತ. ಇದು 2027ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಮಹಾವತಾರ ನರಸಿಂಹ ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತೀಯ ಅನಿಮೇಷನ್ ಕ್ಷೇತ್ರಕ್ಕೆ ಹೊಸ ದಾರಿಯು ಹೌದು. ಪೌರಾಣಿಕತೆಯನ್ನು ಆಧುನಿಕ ತಂತ್ರಜ್ಞಾನದಿಂದ ಜಗತ್ತಿಗೆ ಪರಿಚಯಿಸಿದ ಈ ಕೃತಿ, ಮುಂದಿನ ಭಾಗಗಳಿಗಾಗಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.