ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಮಾಜಿ ನಾಯಕ, ‘ಕ್ಯಾಪ್ಟನ್ ಕೂಲ್’ ಎಂಎಸ್ ಧೋನಿ ಅವರಿಗೆ ಬೈಕ್ ಮತ್ತು ಕಾರುಗಳೆಂದರೆ ಎಷ್ಟು ಪ್ರೀತಿ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಅವರ ಈ ವಾಹನ ಪ್ರೇಮ ಬಾಲಿವುಡ್‌ನ ‘ಭಾಯ್‌ಜಾನ್’ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ನಲ್ಲಿ ಅನಾವರಣಗೊಂಡಿದೆ.

ಇತ್ತೀಚೆಗೆ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲು ಅವರ ಫಾರ್ಮ್‌ಹೌಸ್‌ಗೆ ತೆರಳಿದ್ದ ಧೋನಿ, ಅಲ್ಲಿನ ವಾಹನವೊಂದನ್ನು (ATV/Buggy) ಚಲಾಯಿಸಿ ತಮ್ಮ ಡ್ರೈವಿಂಗ್ ಕೌಶಲ ಮೆರೆದಿದ್ದಾರೆ. ಕೇವಲ ಗಾಡಿ ಓಡಿಸುವುದು ಮಾತ್ರವಲ್ಲದೆ, ಅದನ್ನು ಮನಬಂದಂತೆ ‘ಡ್ರಿಫ್ಟ್’ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವೇಳೆ ಖ್ಯಾತ ಗಾಯಕ ಎಪಿ ದಿಲ್ಲೋನ್ ಕೂಡ ಧೋನಿ ಜೊತೆಗಿದ್ದರು.

ಗಾಯಕ ಎಪಿ ದಿಲ್ಲೋನ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಅಪರೂಪದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅವರು ಧೋನಿ ಮತ್ತು ಸಲ್ಮಾನ್ ಖಾನ್ ಅವರ ಹೆಗಲ ಮೇಲೆ ಕೈಹಾಕಿ ಪೋಸ್ ನೀಡಿದ್ದಾರೆ. ಧೋನಿ ಅವರು ರೇನ್‌ಕೋಟ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರೆ, ಸಲ್ಮಾನ್ ಖಾನ್ ತಮ್ಮ ಎಂದಿನ ಮಾಸ್ ಲುಕ್‌ನಲ್ಲಿ ಮಿಂಚಿದ್ದಾರೆ.

ಸಲ್ಮಾನ್ ಖಾನ್ ಅವರಿಗೆ ಕ್ರೀಡಾ ಮತ್ತು ಸಿನಿಮಾ ಲೋಕದಲ್ಲಿ ದೊಡ್ಡ ಗೆಳೆಯರ ಬಳಗವೇ ಇದೆ. ಎಂಎಸ್ ಧೋನಿ, ರಾಮ್ ಚರಣ್, ಬಾಬಿ ಡಿಯೋಲ್ ಅವರಂತಹ ಸ್ಟಾರ್‌ಗಳು ಆಗಾಗ ಸಲ್ಲು ಆಯೋಜಿಸುವ ಪಾರ್ಟಿಗಳಲ್ಲಿ ಭಾಗಿಯಾಗುತ್ತಾರೆ. ಈ ಬಾರಿಯೂ ಧೋನಿ ಮತ್ತು ಸಲ್ಲು ಭೇಟಿಯಾಗಿ ಸುದೀರ್ಘ ಸಮಯ ಕಳೆದಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ಮೈದಾನದಲ್ಲಿ ಶಾಂತವಾಗಿರುವ ಧೋನಿ, ಸ್ಟೀರಿಂಗ್ ಹಿಡಿದಾಗ ಎಷ್ಟು ರಗಡ್ ಆಗಿರುತ್ತಾರೆ ಎಂಬುದಕ್ಕೆ ಈ ಡ್ರಿಫ್ಟಿಂಗ್ ವಿಡಿಯೋ ಮತ್ತು ಫೋಟೋಗಳೇ ಸಾಕ್ಷಿ.


