ಹೊಸದಿಗಂತ ವರದಿ,ಮೈಸೂರು:
ಅರಮನೆ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅ.೧೩ರಂದು ನಡೆಸಲು ಉದ್ದೇಶಿಸಲಾಗಿರುವ ಮಹಿಷ ದಸರಾ ಆಚರಣೆಗೆ ಪರ-ವಿರೋಧಗಳು ತೀವ್ರವಾದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ‍್ವಜನಿಕ ಹಿತದೃಷ್ಟಿಯಿಂದ
ಮೈಸೂರು ನಗರ ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರದ ವ್ಯಾಪ್ತಿಯಲ್ಲಿ (ಟೌನ್ ಹಾಲ್ ಹೊರತುಪಡಿಸಿ) ಅ.೧೨ ರ ಮಧ್ಯರಾತ್ರಿ ೧೨-೦೦ ಗಂಟೆಯಿಂದ ಅ.೧೪ ರ ಬೆಳಿಗ್ಗೆ ೦೬-೦೦ ಗಂಟೆಯವರೆಗೆ ಸೆಕ್ಷನ್ ೧೪೪ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಈ ಹಿನ್ನಲೆಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ರಾಲಿ, ಬೈಕ್ ರಾಲಿ, ನಡೆಸುವುದು. ಪರ ವಿರೋಧ ಘೋಷಣೆ ಕೂಗುವುದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು, ೦೫ ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು, ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು. ಯಾವುದೇ ಸರ‍್ವಜನಿಕ ಸ್ಥಳದಲ್ಲಿ ಪುಚಾರ, ಧ್ವನಿರ‍್ಧಕ ಬಳಸುವುದು, ಫೆಕ್ಸ್ ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮರ‍್ತಿ ಮೆರವಣಿಗೆ ಮಾಡುವುದನ್ನು ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಸಂಘಟನೆ ಅಥವಾ ಸರ‍್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಹಾಗೂ ಸಭೆ-ಸಮಾರಂಭ ಮೆರವಣಿಗೆ, ಪ್ರತಿಭಟನೆ, ರ‍್ಯಾಲಿ ನಡೆಸಲು ಪ್ರಯತ್ನಿಸಿದಲ್ಲಿ, ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ, ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮಕೈಗೊಳ್ಳಲಾಗುವುದು.
ಈ ಆದೇಶವು ಮದುವೆ ಸಮಾರಂಭಗಳಿಗೆ ಮತ್ತು ಶವಸಂಸ್ಕಾರಗಳಿಗೆ ಹಾಗೂ ಶಾಲಾ, ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯಿಸುವುದಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.