ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡ್ಡಿ ಆತಂಕಗಳಿಂದಾಗಿ 6 ಬಾರಿ ಮುಂದೂಡಿಕೆಯಾಗಿದ್ದ ಭಾರತೀಯ ಶುಭಾಂಶು ಶುಕ್ಲಾ ಅವರ ಅಂತರಿಕ್ಷಯಾನ ಇಂದು ಮಧ್ಯಾಹ್ನ ಕೈಗೂಡುವ ಸಾಧ್ಯತೆಯಿದೆ. 28 ಗಂಟೆ ಪ್ರಯಾಣದ ಬಳಿಕ ಉದ್ದೇಶಿತ ಡಾಕಿಂಗ್ ಅನ್ನು ಗುರುವಾರ ಸಂಜೆ 4:30ಕ್ಕೆ ಕೈಗೊಳ್ಳಲಾಗುವುದು ಎಂದು ನಾಸಾ ಮಾಹಿತಿ ನೀಡಿದೆ.
1984 ರಲ್ಲಿ ಸೋವಿಯತ್ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ರಾಕೇಶ್ ಶರ್ಮಾ ಇತಿಹಾಸ ಬರೆದಿದ್ದರು. 41 ವರ್ಷಗಳ ನಂತರ ಶುಕ್ಲಾ ಅವರು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ಲಕ್ನೋದವರಾದ ಶುಕ್ಲಾ, ಆಕ್ಸಿಯಮ್ ಸ್ಪೇಸ್‌ನ ಇಸ್ರೋ-ನಾಸಾ ಬೆಂಬಲಿತ ವಾಣಿಜ್ಯ ಬಾಹ್ಯಾಕಾಶ ಹಾರಾಟದ ಭಾಗವಾಗಿದ್ದಾರೆ. ಫ್ಲೋರಿಡಾದ ಕೆಎಸ್‌ಸಿಯ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಲಿಫ್ಟ್-ಆಫ್ ಮಾಡಲು ಹೊಂದಿಸಲಾದ ಆಕ್ಸಿಯಮ್-4 (ಆಕ್ಸ್-4) ಕಾರ್ಯಾಚರಣೆಯಲ್ಲಿ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಕ್ಲಾ, ತಜ್ಞರಾದ ಹಂಗೇರಿಯ ಟಿಗೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ ಇದ್ದಾರೆ.
ಉಡಾವಣೆಗೆ ಮುನ್ನ ಆಕ್ಸ್-4 ಸಿಬ್ಬಂದಿ ಮತ್ತು ಸ್ಪೇಸ್‌ಎಕ್ಸ್ ತಂಡಗಳು ಉಡಾವಣಾ ದಿನದ ಚಟುವಟಿಕೆಗಳ ಸಂಪೂರ್ಣ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿವೆ. 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲಿದ್ದಾರೆ.
ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಸೇರಿದಂತೆ 60 ರೀತಿಯ ವಿವಿಧ ಪ್ರಯೋಗ ನಡೆಸಲಿದ್ದಾರೆ. ಇದರಲ್ಲಿ ಭಾರತದ ಪರವಾಗಿ ಶುಕ್ಲಾ ನಡೆಸುವ 7 ಪ್ರಯೋಗ ಕೂಡಾ ಸೇರಿದೆ. ತಮ್ಮ ಪ್ರಯಾಣದ ವೇಳೆ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸವನ್ನು ಐಎಸ್‌ಎಸ್‌ನ ಸಹಯೋಗಿ ಗಳಿಗಾಗಿ ಕೊಂಡೊಯ್ಯಲಿದ್ದಾರೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ಕಾರ್ಯಾಚರಣೆ ನಡೆಸುವ ‘ಆಕ್ಸ್ -4’ ಗಗನಯಾತ್ರಿಗಳು, ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಮತ್ತು ಬಾಹ್ಯಾಕಾಶ ಉದ್ಯಮದ ಪ್ರಮುಖರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.