ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯಲ್ಲಿ ಈ ವರ್ಷ ಮಹತ್ವದ ಬದಲಾವಣೆ ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮೂರು ಮುಖ್ಯ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಶೈಕ್ಷಣಿಕ ವರ್ಷದಿಂದ ಮುಖ್ಯ ಪರೀಕ್ಷೆಗಳ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಪರೀಕ್ಷಾ ವೇಳಾಪಟ್ಟಿ, ಮುಂದಿನ ತರಗತಿಗಳ ಪ್ರವೇಶ ಪ್ರಕ್ರಿಯೆ ಹಾಗೂ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಮೂರು ಪರೀಕ್ಷೆ ಬದಲು ಎರಡೇ ಅವಕಾಶ!
ಮೂರು ಮುಖ್ಯ ಪರೀಕ್ಷೆಗಳ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಸಿಗುತ್ತಿತ್ತು ಎಂಬ ಅಭಿಪ್ರಾಯವಿತ್ತು. ಆದರೆ, ನಿರಂತರವಾಗಿ ಪರೀಕ್ಷೆಗಳನ್ನು ನಡೆಸುವುದರಿಂದ ಶೈಕ್ಷಣಿಕ ವೇಳಾಪಟ್ಟಿ ಮತ್ತು ಉನ್ನತ ಶಿಕ್ಷಣದ ಪ್ರವೇಶ ಪ್ರಕ್ರಿಯೆಗೆ ತೊಂದರೆಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿತ್ತು. ಮಾರ್ಚ್ನಿಂದ ಸೆಪ್ಟೆಂಬರ್ವರೆಗೆ ಪರೀಕ್ಷೆಗಳ ಚಟುವಟಿಕೆ ಮುಂದುವರಿಯುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಎರಡು ಮುಖ್ಯ ಪರೀಕ್ಷೆಗಳನ್ನು ಮಾತ್ರ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ನ.11ರೊಳಗೆ ನೋಂದಣಿ ಕಡ್ಡಾಯ
ಮರುಪರೀಕ್ಷೆ ಬರೆಯುವವರು ಮತ್ತು ಖಾಸಗಿ ಅಭ್ಯರ್ಥಿಗಳ ನೋಂದಣಿಗಾಗಿ ಶಿಕ್ಷಣ ಇಲಾಖೆ ಮಾರ್ಗಸೂಚಿ ಹಾಗೂ ಕೈಪಿಡಿಗಳನ್ನು ಬಿಡುಗಡೆ ಮಾಡಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ಶಾಲಾ ಮುಖ್ಯಶಿಕ್ಷಕರು ಮತ್ತು ಕಾಲೇಜು ಪ್ರಾಂಶುಪಾಲರು ತಮ್ಮ ಸಂಸ್ಥೆಯ ಲಾಗಿನ್ ಮೂಲಕ ನವೆಂಬರ್ 11ರೊಳಗೆ ಪೂರ್ಣಗೊಳಿಸಬೇಕು.
ವಿದ್ಯಾರ್ಥಿಗಳ ನೋಂದಣಿಗೆ SATS (Student Achievement Tracking System) ತಂತ್ರಾಂಶವನ್ನು ಬಳಸಲಾಗುತ್ತಿದೆ. ಅಭ್ಯರ್ಥಿಯ ಹೆಸರು, ತಂದೆ-ತಾಯಿಯ ಹೆಸರು, ಜನ್ಮದಿನಾಂಕ, ವರ್ಗ, ಧರ್ಮ, ಲಿಂಗ ಮತ್ತು ಪರೀಕ್ಷೆಯ ಮಾಧ್ಯಮದಂತಹ ವಿವರಗಳಲ್ಲಿ ತಪ್ಪುಗಳಿದ್ದರೆ, ನೋಂದಣಿಗೂ ಮುನ್ನ SATS ತಂತ್ರಾಂಶದಲ್ಲೇ ತಿದ್ದುಪಡಿ ಮಾಡಿಸಬೇಕು. ಲಾಗಿನ್ ಮೂಲಕ ಈ ವಿವರಗಳನ್ನು ನೇರವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.



