Tuesday, November 18, 2025

ಲಾಲು ಕುಟುಂಬದಲ್ಲಿ ಭಾರೀ ಬಿರುಕು: ರೋಹಿಣಿ ಆಚಾರ್ಯ ಬಳಿಕ ಮನೆ ಬಿಟ್ಟ ಮೂವರು ಸಹೋದರಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ಚುನಾವಣೆ ಸೋಲು ಲಾಲು ಯಾದವ್‌ ಅವರ ಕುಟುಂಬದಲ್ಲಿ ಸದ್ಯ ಬಿರುಗಾಳಿ ಎಬ್ಬಿಸಿದ್ದು, ರೋಹಿಣಿ ಆಚಾರ್ಯ ಅವರ ಸ್ಫೋಟಕ ಸಾರ್ವಜನಿಕ ಆಕ್ರೋಶ ಮತ್ತು ಕುಟುಂಬದೊಂದಿಗೆ ಸಂಬಂಧ ಕಡಿದುಕೊಳ್ಳುವ ನಿರ್ಧಾರದ ಬಿಕ್ಕಟ್ಟು ತೀವ್ರಗೊಳಿಸಿದೆ.

ಇತ್ತ ರೋಹಿಣಿ ಅವರು ಮನೆ ತೊರೆದ ನಂತರ ಅವರ ಸಹೋದರಿಯರಾದ ರಾಜಲಕ್ಷ್ಮಿ, ರಾಗಿಣಿ, ಮತ್ತು ಚಂದಾ ತಮ್ಮ ಮಕ್ಕಳೊಂದಿಗೆ ಪಾಟ್ನಾದ ಕುಟುಂಬ ನಿವಾಸವನ್ನು ತೊರೆದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಲಾಲು ಪ್ರಸಾದ್ ಅವರ ಪುತ್ರಿ ಮತ್ತು ವೃತ್ತಿಯಲ್ಲಿ ವೈದ್ಯೆಯಾಗಿರುವ ರೋಹಿಣಿ ಆಚಾರ್ಯ ಅವರು ಪಾಟ್ನಾದಲ್ಲಿರುವ ಲಾಲು ಯಾದವ್‌ ಅವರ ನಿವಾಸ ತೊರೆಯುತ್ತಿರುವ ಬಗ್ಗೆ ಮತ್ತು ರಾಜಕೀಯವನ್ನು ತ್ಯಜಿಸಿ, ತಮ್ಮ ಕುಟುಂಬದಿಂದ ದೂರವಾಗುತ್ತಿರುವ ಬಗ್ಗೆ ಬಹಿರಂಗವಾಗಿ ಕೊಟ್ಟಿರುವ ಹೇಳಿಕೆ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅವರ ಈ ನಡೆ ಬೆನ್ನಲ್ಲೇ ಮೂವರು ಸಹೋದರಿಯರು ಕುಟುಂಬದಿಂದ ದೂರಾಗಿ ದೆಹಲಿಯತ್ತ ಪ್ರಯಾಣ ಬೆಳಸಿದ್ದಾರೆ.

ತೇಜಸ್ವಿ ಯಾದವ್ ಅವರ ಆಪ್ತರಾದ, ಆರ್‌ಜೆಡಿಯ ರಾಜ್ಯಸಭಾ ಸಂಸದ ಸಂಜಯ್ ಯಾದವ್ ಮತ್ತು ದೀರ್ಘಕಾಲದ ಸಹವರ್ತಿ ರಮೀಜ್ ಅವರೊಂದಿಗಿನ ವಾಗ್ವಾದದ ಸಮಯದಲ್ಲಿ ಅಶ್ಲೀಲವಾಗಿ ನಿಂದಿಸಲಾಯಿತು. ಈ ವೇಳೆ ಯಾರೋ ಒಬ್ಬರು ಚಪ್ಪಲಿಯಿಂದ ಹೊಡೆಯಲು ಯತ್ನಿಸಿದರು ಎಂದು ರೋಹಿಣಿ ಆರೋಪಿಸಿದ್ದಾರೆ. ಜೊತೆಗೆ ಕುಟುಂಬದಿಂದ ಹೊರಹಾಕಿದ್ದಾರೆ.

ಮನೆ ತೊರೆದ ಮೂವರು ಸಹೋದರಿಯರು
ಸರ್ಕ್ಯುಲರ್ ರಸ್ತೆಯಲ್ಲಿರುವ ಲಾಲು ಮತ್ತು ರಾಬ್ರಿ ದೇವಿ ಅವರ ನಿವಾಸವನ್ನು ಸದ್ದಿಲ್ಲದೆ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರು ತೊರೆದಿದ್ದಾರೆ. ಕಳೆದ ಎರಡು ದಿನಗಳ ಘಟನೆಗಳಿಂದ ಅವರು ತೀವ್ರವಾಗಿ ನೊಂದಿದ್ದರು. ಒಂದು ಕಾಲದಲ್ಲಿ ಆರ್‌ಜೆಡಿಯ ರಾಜಕೀಯ ಕೇಂದ್ರವಾಗಿದ್ದ ಮನೆಯಲ್ಲಿ ಈಗ ಕೇವಲ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ ಮತ್ತು ಮಿಸಾ ಭಾರತಿ ಮಾತ್ರ ಉಳಿದಿದ್ದಾರೆ.

error: Content is protected !!