Monday, October 27, 2025

ಬೆಂಗಳೂರಿನಲ್ಲಿ ಮಹಾ ದುರಂತ: ಸಿಲಿಂಡರ್‌ ಸ್ಫೋಟಕ್ಕೆ ಮನೆ ಧೂಳೀಪಟ, ಓರ್ವ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನ ಕೆ.ಆರ್‌. ಪುರಂನ ತ್ರಿವೇಣಿ ನಗರದಲ್ಲಿ ಭೀಕರ ಸಿಲಿಂಡರ್‌ ಸ್ಫೋಟ ಸಂಭವಿಸಿದ್ದು, ಒಂದು ಬೃಹತ್ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಂಡಿದೆ. ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ಈ ಘಟನೆಯು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಡೆದಿದೆ. ಸ್ಫೋಟದ ತೀವ್ರತೆಯು ಎಷ್ಟು ಪ್ರಬಲವಾಗಿತ್ತೆಂದರೆ, ಇಡೀ ಕಟ್ಟಡವೇ ಕುಸಿದು ಧೂಳೀಪಟವಾಗಿದೆ. ಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜುಗಳು ಸಹ ಒಡೆದು ಹಾನಿಯಾಗಿವೆ.

ದುರಂತ ಸಂಭವಿಸಿದ ಸಮಯದಲ್ಲಿ ಕಟ್ಟಡದೊಳಗೆ ಇದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದ ಮೂವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಕೆ.ಆರ್‌. ಪುರಂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ನಿಖರ ಕಾರಣವನ್ನು ಪತ್ತೆಹಚ್ಚಲು ಬಾಂಬ್ ಸ್ಕ್ವಾಡ್‌ ಮತ್ತು ಡಾಗ್ ಸ್ಕ್ವಾಡ್ ಅಧಿಕಾರಿಗಳು ಸಹ ಸ್ಥಳದಲ್ಲಿ ಕೂಲಂಕುಷ ತನಿಖೆ ಕೈಗೊಂಡಿದ್ದಾರೆ. ಪ್ರಸ್ತುತ, ಸಿಲಿಂಡರ್‌ ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

error: Content is protected !!